ನವದೆಹಲಿ: ಭಾರತದ ಆರ್ಥಿಕ ಬೆಳವಣಿಗೆಯು 'ಬಹಳ ದುರ್ಬಲವಾಗಿದೆ' ಎಂದು ತೋರುತ್ತಿದೆ. ಹೀಗಾಗಿ ಆರ್ಥಿಕ ಬೆಳವಣಿಗೆ ದರ ನಿರೀಕ್ಷೆಗಿಂತ ಕಡಿಮೆಯಾಗಬಹುದು ಎಂದು ಭಾರತೀಯ ರಿಸರ್ವ್ ಬ್ಯಾಂಕ್(ಆರ್ ಬಿಐ) ಹಣಕಾಸು ನೀತಿ ಸಮಿತಿ(ಎಂಪಿಸಿ)ಯ ಸದಸ್ಯ ಜಯಂತ್ ಆರ್ ವರ್ಮಾ ಅವರು ಭಾನುವಾರ ಹೇಳಿದ್ದಾರೆ.
ಭಾರತದಲ್ಲಿ 2022-23 ರಲ್ಲಿ ಹಣದುಬ್ಬರವು ಅಧಿಕವಾಗಿದೆ. ಆದರೆ 2023-24 ರಲ್ಲಿ ಅದು ಗಮನಾರ್ಹವಾಗಿ ಕಡಿಮೆಯಾಗುತ್ತದೆ ಎಂದು ವರ್ಮಾ ತಿಳಿಸಿದ್ದಾರೆ.
"ಆದಾಗ್ಯೂ, ದೇಶದ ಆರ್ಥಿಕ ಬೆಳವಣಿಗೆಯು ಬಹಳ ದುರ್ಬಲವಾಗಿ ಕಂಡುಬರುತ್ತಿದೆ ಮತ್ತು ವಿತ್ತೀಯ ಬಿಗಿಗೊಳಿಸುವಿಕೆಯು ಬೇಡಿಕೆಯನ್ನು ಕುಗ್ಗಿಸುತ್ತಿದೆ" ಎಂದು ಅವರು ಪಿಟಿಐಗೆ ತಿಳಿಸಿದ್ದಾರೆ.
ಹೆಚ್ಚಿನ ಬಡ್ಡಿದರಗಳು ಖಾಸಗಿ ಬಂಡವಾಳ ಹೂಡಿಕೆಯನ್ನು ಹೆಚ್ಚು ಕಷ್ಟಕರವಾಗಿಸುತ್ತಿದೆ ಎಂದ ವರ್ಮಾ, ಸರ್ಕಾರವು ಹಣಕಾಸಿನ ಬಲವರ್ಧನೆಯ ಕ್ರಮದಲ್ಲಿದೆ ಆರ್ಥಿಕತೆಗೆ ಬೆಂಬಲವನ್ನು ಕಡಿಮೆ ಮಾಡುತ್ತಿದೆ ಎಂದಿದ್ದಾರೆ.
ಭಾರತೀಯ ರಿಸರ್ವ್ ಬ್ಯಾಂಕ್ 2023- 24ರಲ್ಲಿ ಭಾರತ ಶೇಕಡಾ 6.4 ರಷ್ಟು ಆರ್ಥಿಕ ಬೆಳವಣಿಗೆ ದಾಖಲಿಸಲಿದೆ ಎಂದು ಅಂದಾಜಿಸಿದೆ. ರಾಷ್ಟ್ರೀಯ ಅಂಕಿಅಂಶ ಕಚೇರಿಯ(NSO) ಮೊದಲ ಮುಂಗಡ ಅಂದಾಜಿನ ಪ್ರಕಾರ 2022-23 ರಲ್ಲಿ ಒಟ್ಟು ನಿವ್ವಳ ಆಂತರಿಕ ಉತ್ಪಾದನೆ (ಜಿಡಿಪಿ)ಯ ಬೆಳವಣಿಗೆ ದರ ಶೇ.7ರಷ್ಟು ಆಗಲಿದೆ ಎಂದು ನಿರೀಕ್ಷಿಸಲಾಗಿದೆ.