ಇಸ್ರೇಲ್‍ಗೆ ತೆರಳಿದ್ದ ರೈತರ ಗುಂಪಿನಿಂದ ತಪ್ಪಿಸಿಕೊಂಡಿದ್ದ ಬಿಜು ಕುರಿಯನ್ ನಾಳೆ ಕೇರಳಕ್ಕೆ
0
ಫೆಬ್ರವರಿ 26, 2023
ತಿರುವನಂತಪುರಂ: ಆಧುನಿಕ ಕೃಷಿ ಪದ್ಧತಿಯನ್ನು ಕಲಿಯಲು ರಾಜ್ಯ ಸರ್ಕಾರ ಇಸ್ರೇಲ್‍ಗೆ ಕರೆದೊಯ್ದ ಗುಂಪಿನಿಂದ ನಾಪತ್ತೆಯಾಗಿದ್ದ ಕಣ್ಣೂರು ಜಿಲ್ಲೆಯ ಉಚ್ಚಿ ಮೂಲದ ಬಿಜು ಕುರಿಯನ್ ನಾಳೆ ಕೇರಳಕ್ಕೆ ಮರಳಲಿದ್ದಾರೆ.
ಭಾನುವಾರ ಮಧ್ಯಾಹ್ನ ಟೆಲ್ ಅವಿವ್ ವಿಮಾನ ನಿಲ್ದಾಣದಿಂದ ಬಿಜು ಕುರಿಯನ್ ಕೇರಳಕ್ಕೆ ಹೊರಟಿದ್ದಾರೆ ಎಂದು ವರದಿಯಾಗಿದೆ. ಇದನ್ನು ದಿ ಹಿಂದೂ ದಿನಪತ್ರಿಕೆ ವರದಿ ಮಾಡಿದೆ.
ಆಧುನಿಕ ಕೃಷಿ ಪದ್ಧತಿ ಅಧ್ಯಯನಕ್ಕೆಂದು ಕೇರಳದಿಂದ ಇಸ್ರೇಲ್‍ಗೆ ತೆರಳಿದ್ದ ತಂಡದಿಂದ ಫೆಬ್ರವರಿ 16ರಂದು ಸಂಜೆ 7 ಕ್ಕೆ ಬಿಜು ಕುರಿಯನ್ ನಾಪತ್ತೆಯಾಗಿದ್ದರು. ಅವರು ಟೆಲ್ ಅವಿವ್ ಬಳಿ ಇರುವ ಹೆಜ್ರ್ಲಿಯಾ ನಗರದಿಂದ ನಾಪತ್ತೆಯಾಗಿದ್ದರು.
ಗುಂಪು ಹೋದ ಮೊದಲ ದಿನ, ಅವರು ಜೆರುಸಲೆಮ್ಗೆ ಭೇಟಿ ನೀಡಿದ್ದರು. ಮತ್ತು ಮರುದಿನ ಬೆಥ್ ಲೆಹೆಮ್ಗೆ ತೆರಳಿದ್ದರು. ಬೆತ್ಲೆಹೆಮ್‍ನಲ್ಲಿ ಒಂದು ದಿನ ಕಳೆದ ನಂತರ, ಅವರು ಮತ್ತೆ ರೈತ ತಂಡದೊಂದಿಗೆ ಜೊತೆಯಾಗಿ ರಾಜ್ಯಕ್ಕೆ ಮರಳಲು ಯೋಜಿಸಿದ್ದರು. ಆದರೆ, ಕೃಷಿ ಅಧ್ಯಯನಕ್ಕೆ ಬಂದಿದ್ದ ತಂಡ ಕೇರಳಕ್ಕೆ ಮರಳಿತ್ತು. ಕುರಿಯನ್ ತಂಡದೊಂದಿಗಿರದೆ ನಾಪತ್ತೆಯಾಗಿದ್ದರು.
ಇದೇ ವೇಳೆ ಕುರಿಯನ್ ನಾಪತ್ತೆಯಿಂದ ಆಗಿರುವ ತೊಂದರೆ ಬಗ್ಗೆ ಕುಟುಂಬ ಅಸಮಾಧಾನ ವ್ಯಕ್ತಪಡಿಸಿತ್ತು. ಬಳಿಕ ವಿವಾದವಾದ ಬಳಿಕ ಕುರಿಯನ್ ನನ್ನು ಭಾರತದ ದೂತಾವಾಸದ ಸಹಾಯದ ಮೂಲಕ ಪತ್ತೆಹಚ್ಚಲಾಗಿತ್ತು. ಈ ಮಧ್ಯೆ ಕುರಿಯನ್ ರಾಜ್ಯ ಕೃಷಿ ಸಚಿವ ಪಿ. ಪ್ರಸಾದ್ ಮತ್ತಿತರರ ಬಳಿ ಕ್ಷಮೆ ಯಾಚಿಸಿದರು ಎಂದು ಗೊತ್ತಾಗಿದೆ.
Tags