ನವದೆಹಲಿ: ವಿದ್ಯಾರ್ಥಿಗಳ ಮೌಲ್ಯಮಾಪನ, ಶಾಲೆಗಳ ಕಾರ್ಯಕ್ಷಮತೆ ಪರಿಶೀಲನೆಗಾಗಿ ಸ್ಥಾಪಿಸಲಾಗುವ ರಾಷ್ಟ್ರ ಮಟ್ಟದ ನಿಯಂತ್ರಣ ವ್ಯವಸ್ಥೆಯಾದ 'ಪರಖ್'ನಿಂದ (ಪಿಎಆರ್‌ಎಕೆಎಚ್) ಮೌಲ್ಯಮಾಪನ ಪ್ರಕ್ರಿಯೆಯಲ್ಲಿ ಏಕರೂಪತೆ ಸಾಧಿಸಲು ಸಾಧ್ಯ ಎಂದು ಎಜುಕೇಷನಲ್ ಟೆಸ್ಟಿಂಗ್ ಸರ್ವೀಸ್ (ಇಟಿಎಸ್) ಸಂಸ್ಥೆ ಸಿಇಒ ಅಮಿತ್ ಸೇವಕ್ ಹೇಳಿದ್ದಾರೆ.
'ಪರಖ್' ಎಂಬುದು 'ಪರ್ಫಾರ್ಮನ್ಸ್ ಅಸೆಸ್‌ಮೆಂಟ್, ರಿವಿವ್ಯೂ ಅಂಡ್ ಅನಲಿಸಿಸ್ ಆಫ್ ನಾಲೆಡ್ಜ್ ಫಾರ್ ಹೋಲಿಸ್ಟಿಕ್ ಡೆವಲೆಪ್‌ಮೆಂಟ್' ಎಂಬುದರ ಸಂಕ್ಷಿಪ್ತರೂಪ. ನೂತನ ರಾಷ್ಟ್ರೀಯ ಶಿಕ್ಷಣ ನೀತಿ (ಎನ್‌ಇಪಿ)ಯಡಿ ಈ ನಿಯಂತ್ರಣ ವ್ಯವಸ್ಥೆಯನ್ನು ಸ್ಥಾಪಿಸಲಾಗುತ್ತದೆ.
ಎನ್‌ಸಿಇಆರ್‌ಟಿ, 'ಪರಖ್'ಅನ್ನು ಸ್ಥಾಪಿಸುವ ಹೊಣೆಯನ್ನು ಇಟಿಎಸ್‌ಗೆ ವಹಿಸಿದೆ. ಈ ಸಂಸ್ಥೆಯು ಟಿಒಇಎಫ್‌ಎಲ್, ಜಿಆರ್‌ಇ ಅಂತಹ ಪರೀಕ್ಷೆಗಳನ್ನು ನಡೆಸುತ್ತದೆ.
'ವಿದ್ಯಾರ್ಥಿಗಳ ಮೌಲ್ಯಮಾಪನಕ್ಕೆ ಸಂಬಂಧಿಸಿದಂತೆ ಮಾರ್ಗಸೂಚಿಗಳನ್ನು, ನಿಯಮಗಳನ್ನು 'ಪರಖ್' ರೂಪಿಸುತ್ತದೆ' ಎಂದು ಅಮಿತ್ ಅವರು ಪಿಟಿಐ ಸುದ್ದಿಸಂಸ್ಥೆಗೆ ನೀಡಿರುವ ಸಂದರ್ಶನದಲ್ಲಿ ಹೇಳಿದ್ದಾರೆ.
36 ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಲ್ಲಿ ಒಟ್ಟು 62 ಪರೀಕ್ಷಾ ಮಂಡಳಿಗಳಿವೆ. ದೇಶದ ಭೌಗೋಳಿಕ ಹಾಗೂ ಅನೇಕ ಭಾಷೆಗಳ ಕಾರಣಗಳಿಂದಾಗಿ ಶಾಲಾ ಶಿಕ್ಷಣದಲ್ಲಿ ವಿವಿಧತೆ ಇದೆ. ಆದರೆ, ಪರಖ್ ರೂಪಿಸುವ ನಿಯಮಗಳು ದೇಶದಲ್ಲಿರುವ ಎಲ್ಲಾ ಪರೀಕ್ಷಾ ಮಂಡಳಿಗಳಿಗೆ ಅನ್ವಯವಾಗಲಿರುವ ಕಾರಣ, ಮೌಲ್ಯಮಾಪನ ವಿಷಯದಲ್ಲಿ ಏಕರೂಪತೆ ಸಾಧ್ಯವಾಗಲಿದೆ ಎಂದು ಹೇಳಿದ್ದಾರೆ.