ನವದೆಹಲಿ:ಅದಾನಿ ಗ್ರೂಪ್‌ನಲ್ಲಿ ಸಾರ್ವಜನಿಕ ವಲಯದ ಬ್ಯಾಂಕ್‌ಗಳ ಹೂಡಿಕೆ ಕುರಿತು ಪ್ರತಿಪಕ್ಷಗಳ ಟೀಕೆಗೆ ಪ್ರತಿಕ್ರಿಯಿಸಿದ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ಕೇಂದ್ರೀಯ ಬ್ಯಾಂಕ್‌ಗಳು ತಮ್ಮ ನಿರ್ಧಾರಗಳನ್ನು ತೆಗೆದುಕೊಳ್ಳಲು ಸ್ವತಂತ್ರವಾಗಿವೆ ಎಂದು ಹೇಳಿದರು.
'Business Today'ಯ ಬಜೆಟ್ ದುಂಡುಮೇಜಿನ ಸಭೆಯಲ್ಲಿ ಮಾತನಾಡಿದ ನಿರ್ಮಲಾ ಸೀತಾರಾಮನ್, "ಎಲ್‌ಐಸಿ ಹಾಗೂ ಎಸ್‌ಬಿಐ ಎರಡೂ ಸಾರ್ವಜನಿಕವಾಗಿ ತಮ್ಮ ಹೇಳಿಕೆಗಳನ್ನು ನೀಡಿವೆ. ಆ ಎರಡು ಸಂಸ್ಥೆಗಳ ಮುಖ್ಯಸ್ಥರು ಅದರ ಬಗ್ಗೆ ಬಹಳ ವಿವರವಾಗಿ ಮಾತನಾಡಿದ್ದಾರೆ. ಹಾಗಾಗಿ ನಾನು ಆ ಕುರಿತು ಏನೂ ಹೇಳಲಾರೆ"ಎಂದರು.
"ನಾನು ಪ್ರತಿ ಎರಡು ವಾರಗಳಿಗೊಮ್ಮೆ ಅಲ್ಲಿಗೆ (ಎಸ್‌ಬಿಐ ಮತ್ತು ಎಲ್‌ಐಸಿ) ಹೋಗಿ ನೀವು ಈ ಕಂಪನಿ ಅಥವಾ ಅದನ್ನು ಆಯ್ಕೆ ಮಾಡಿಕೊಳ್ಳಿ ಎಂದು ಹೇಳುವುದು ಸರಿಯಲ್ಲ ಎನ್ನುವುದು ನನ್ನ ಭಾವನೆ. ಅವರು ಸ್ವತಂತ್ರವಾಗಿ ತಮ್ಮ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದ್ದಾರೆ " ಎಂದು ಅವರು ಹೇಳಿದರು.
ಸಾರ್ವಜನಿಕ ವಲಯದ ಘಟಕಗಳಾದ ಜೀವ ವಿಮಾ ನಿಗಮ (ಎಲ್‌ಐಸಿ) ಹಾಗೂ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ) ಕಂಪನಿಯಲ್ಲಿ ಹೂಡಿಕೆ ಮಾಡಿರುವುದರಿಂದ ಅದಾನಿ ಗ್ರೂಪ್‌ನ ಷೇರುಗಳಲ್ಲಿನ ಇತ್ತೀಚಿನ ಏರಿಳಿತವು ಸಾಮಾನ್ಯ ಜನರ ಹಣವನ್ನು ಒಳಗೊಂಡಿರುವ ಹಗರಣವಾಗಿದೆ ಎಂದು ಪ್ರತಿಪಕ್ಷವು ಆರೋಪಿಸಿದೆ.