ಕಾಸರಗೋಡು: ದತ್ತು ಸ್ವೀಕರಿಸಿದ ಮಗುವಿನ ರಕ್ಷಕರು ನಿಧನರಾದ ಹಿನ್ನೆಯಲ್ಲಿ ಆ ಮಗುವಿಗೆ ಸೇರ್ಪಡೆಗೊಳ್ಳಬೇಕಾಗಿದ್ದ ಲಕ್ಷಾಂತರ ರಊ. ಮೌಲ್ಯದ ಆಸ್ತಿಯನ್ನು ಲಪಟಾಯಿಸಲು ಯತ್ನಿಸಿದ ಪ್ರಕರಣಕ್ಕೆ ಸಂಬಂಧಿಸಿ ಮಹಿಳೆ ಸೇರಿದಂತೆ ಮೂವರ ವಿರುದ್ಧ ಬದಿಯಡ್ಕ ಠಾಣೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ. ಕುಂಬ್ಡಾಜೆ ಉಬ್ರಂಗಳ ತಾಂತ್ರಿಕ ಸದನದ ದಿ. ಬಾಲಕೃಷ್ಣ ತಂತ್ರಿ ಅವರ ಪತ್ನಿ ಸುಗುಣಾ ತಂತ್ರಿ(74), ಇವರ ಸಹೋದರ ದ.ಕ ಜಿಲ್ಲೆಯ ರಾಮಕುಂಜ ನಿವಾಸಿ ನರಹರಿ ಉಪಾಧ್ಯಾಯ(54) ಹಾಗೂ ಇವರ ಸಹಾಯಕನ ವಿರುದ್ಧ ಈ ಕೇಸು ದಾಖಲಾಗಿದೆ. ನ್ಯಾಯಾಲಯದ ಆದೇಶದನ್ವಯ ಈ ದೂರು ದಾಖಲಾಗಿದೆ.
ಮಕ್ಕಳಿಲ್ಲದ ಕಾರಣ ಬಾಲಕೃಷ್ಣ ತಂತ್ರಿ-ಸುಗುಣಾ ತಂತ್ರಿ ದಂಪತಿ 12ರ ಹರೆಯದ ಗಂಡುಮಗುವನ್ನು ದತ್ತುಸ್ವೀಕಾರ ನಿಯಮ ಪ್ರಕಾರ 2020 ಜೂ. 29ರಂದು ದತ್ತು ತೆಗೆದುಕೊಂಡಿದ್ದರು. ದತ್ತು ಸ್ವೀಕರಿಸಿದ ಕೆಲವೇ ದಿವಸಗಳಲ್ಲಿ ಬಾಲಕೃಷ್ಣ ತಂತ್ರಿ ಅವರು ನಿಧನರಾಗಿದ್ದರು. ಈ ಮಧ್ಯೆ ದತ್ತು ಪಡೆದುಕೊಂಡಿರುವ ಮಗುವನ್ನು ಸಂರಕ್ಷಿಸುವ ಜವಾಬ್ದಾರಿ ಹೊತ್ತಿದ್ದ ಸುಗುಣಾ ತಂತ್ರಿ ಹಾಗೂ ಇವರ ಸಹೋದರರು ಸೇರಿ ಮಗುವಿನ ನಕಲಿ ಸಹಿ ಪಡೆದು ಮಗುವಿಗೆ ಸೇರಬೇಕಾಗಿದ್ದ ಆಸ್ತಿಯನ್ನು ಕಬಳಿಸಲು ಯತ್ನಿಸಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ. ಜತೆಗೆ ಬಾಲಕೃಷ್ಣ ತಂತ್ರಿ ಅವರು ಬಳಸುತ್ತಿದ್ದ ಆಮ್ನಿ ವಾಹನ ಹಾಗೂ ಆಟೋರಿಕ್ಷಾವನ್ನು ಇವರು ಮಾರಾಟ ಮಾಡಿದ್ದಾರೆ. ನಕಲಿ ಸಹಿ ಪಡೆದು ವಂಚಿಸಿರುವ ವಿಷಯ ತಡವಾಗಿ ಬೆಳಕಿಗೆ ಬಂದಿದ್ದು, ಈ ಬಗ್ಗೆ ಮಗುವಿನ ತಂದೆ ದೂರು ನೀಡಿದ್ದಾರೆ. ಗೂಢಾಲೋಚನೆ, ವಿಶ್ವಾಸ ವಂಚನೆ, ಆಸ್ತಿ ಅಪಹರಣ, ಜುವೆನೈಲ್ ಜಸ್ಟಿಸ್ ಆಕ್ಟ್ ಮುಂತಾದ ವಿಭಾಗಗಳಿಗೆ ಸಂಬಂಧಿಸಿ ಆರೋಪಿಗಳ ವಿರುದ್ಧ ಕೇಸು ದಾಖಲಿಸಲಾಗಿದೆ.
ದತ್ತು ಪಡೆದ ಮಗುವಿನ ನಕಲಿ ಸಹಿ ಪಡೆದು ಆಸ್ತಿ ಎಗರಿಸಲು ಯತ್ನ-ಮಹಿಳೆ ಸೇರಿದಂತೆ ಮೂವರಿಗೆ ಕೇಸು
0
ಫೆಬ್ರವರಿ 16, 2023
Tags