ನವದೆಹಲಿ: 'ಕುಟುಂಬದೊಳಗೇ ನಡೆಯುವ ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯವು ಕ್ಷಮಿಸಲಾರದಂತಹ ದ್ರೋಹ. ಅದು ಮಗುವಿನ ನಂಬಿಕೆಗೆ ಮಾಡಿದ ಅಪಚಾರ. ಅಂತಹ ಸಂತ್ರಸ್ತರು ಎಲ್ಲಾ ಬಗೆಯ ಬೆಂಬಲಕ್ಕೆ ಅರ್ಹರು' ಎಂದು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಹಿಮಾ ಕೊಹ್ಲಿ ತಿಳಿಸಿದ್ದಾರೆ.
ದೆಹಲಿಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗವು ಶನಿವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ 'ಚಿಲ್ಡ್ರನ್ ಫಸ್ಟ್' ನಿಯತಕಾಲಿಕೆಯ ಮೂರನೇ ಸಂಚಿಕೆ ಬಿಡುಗಡೆ ಮಾಡಿ ಮಾತನಾಡಿದ ಅವರು, 'ಈ ಬಗೆಯ ದೌರ್ಜನ್ಯಗಳು ಸಂತ್ರಸ್ತೆಯ ಮೇಲೆ ದೀರ್ಘಕಾಲಿಕ ಪರಿಣಾಮ ಉಂಟುಮಾಡುತ್ತವೆ. ಅನೇಕ ಬಾರಿ ಕುಟುಂಬ ಗೌರವದ ಹೆಸರಿನಡಿ ಇಂತಹ ಪ್ರಕರಣಗಳನ್ನು ಮುಚ್ಚಿಹಾಕಲಾಗುತ್ತದೆ. ಇದು ವಿಪರ್ಯಾಸಕರ ಸಂಗತಿ' ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
'ಕುಟುಂಬದೊಳಗೇ ನಡೆಯುವ ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯವು ಬಹಳ ಸೂಕ್ಷ್ಮವಾದ ವಿಷಯ. ನಿಷೇಧದ ಭೀತಿ ಹಾಗೂ ಮೌನದಿಂದಾಗಿಯೇ ಇದು ಆಗಾಗ್ಗೆ ಮುಚ್ಚಿಹೋಗುತ್ತದೆ. ನಿರಂತರವಾದ ಜಾಗೃತಿ, ಲೈಂಗಿಕ ಶಿಕ್ಷಣ, ಸಂತ್ರಸ್ತೆಗೆ ಅಗತ್ಯ ಬೆಂಬಲ ಒದಗಿಸುವುದು, ಕಾನೂನು ಮತ್ತು ನೀತಿಗಳನ್ನು ಬಲಪಡಿಸುವುದು, ಸಮುದಾಯಗಳೊಂದಿಗೆ ತೊಡಗಿಸಿಕೊಳ್ಳುವುದು ಹೀಗೆ ಹಲವು ಉಪಕ್ರಮಗಳ ಮೂಲಕ ಇದಕ್ಕೆ ಕಡಿವಾಣ ಹಾಕಬಹುದು' ಎಂದೂ ಹೇಳಿದ್ದಾರೆ.