ಕೊಟ್ಟಾಯಂ: ಮದ್ವೆ ಅನ್ನೋದು ಪ್ರತಿಯೊಬ್ಬರ ಬದುಕಿನಲ್ಲಿ ಮಹತ್ತರ ಘಟ್ಟ. ನೂರಾರು ಕನಸಿನ ಬುತ್ತಿಯೊಂದಿಗೆ ವಧು-ವರರು ದಾಂಪತ್ಯಕ್ಕೆ ಕಾಲಿಡುತ್ತಾರೆ. ಅದಕ್ಕೂ ಮುನ್ನ ಮದ್ವೆ ಹೀಗೆ ನಡೆಯಬೇಕು ಎಂದು ಯೋಜನೆ ರೂಪಿಸಿರುತ್ತಾರೆ. ಆದರೆ, ನಮ್ಮ ಕೈಯಲ್ಲಿ ಏನೂ ಇಲ್ಲ ಎನ್ನುವಂತೆ ಕೆಲವೊಮ್ಮೆ ಅನಿರೀಕ್ಷಿತ ಘಟನೆಗಳು ನಡೆದುಬಿಡುತ್ತವೆ.
ಇದಕ್ಕೆ ತಾಜಾ ನಿದರ್ಶನ ಎಂಬಂತೆ ಕೇರಳದಲ್ಲಿ ಒಂದು ಘಟನೆ ನಡೆದಿದೆ.
ನಾಳೆ ಮದುವೆ ನಡೆಯಬೇಕು ಅನ್ನುವಷ್ಟರಲ್ಲಿ ಮದುವೆಯ ಹಿಂದಿನ ದಿನದಂದು ವರ ನಾಪತ್ತೆಯಾದ ಸಂಗತಿ ವಧುವಿನ ಕುಟುಂಬವನ್ನು ಆಘಾತಕ್ಕೆ ದೂಡಿತು. ಆದರೆ, ನಂತರ ನಡೆದಿದ್ದು ಮದುವೆಗೆ ಬಂದಿದ್ದ ಎಲ್ಲರನ್ನೂ ಹುಬ್ಬೇರಿಸುವಂತೆ ಮಾಡಿತು.
ವರ ನಾಪತ್ತೆಯಾಗಿದ್ದ ಮರು ದಿನವೇ ಅದೇ ಮುಹೂರ್ತದಲ್ಲಿ ಮದುವೆಗೆ ಬಂದಿದ್ದ ಯುವ ಅತಿಥಿ ಹಾಗೂ ಕಾಂಗ್ರೆಸ್ ಕಾರ್ಯಕರ್ತನನ್ನು ಮದುವೆಯಾಗುವ ಮೂಲಕ ವರನ ಕುಟುಂಬಕ್ಕೆ ವಧುವಿನ ಕುಟುಂಬ ಶಾಕ್ ನೀಡಿದೆ. ಈ ಘಟನೆ ಕೇರಳದ ಕೊಟ್ಟಾಯಂ ಥಲಯೋಲಪರಂಬುವಿನಲ್ಲಿ ನಡೆದಿದೆ.
ಯುವ ಕಾಂಗ್ರೆಸ್ ಕಾರ್ಯಕರ್ತ ಸುಮೀರ್ ಅವರು ಕೊಟ್ಟೂರಿನ ಫಾತಿಮಾ ಶಹನಾಝ್ ಅವರನ್ನು ವಿವಾಹವಾದರು. ಮದುವೆಯ ಎಲ್ಲ ಸಿದ್ಧತೆಗಳು ಮುಗಿದಾಗ ಥಲಯೋಲಪರಂಬುವಿನ ವರ ನಾಪತ್ತೆಯಾಗಿರುವ ಮಾಹಿತಿ ಸಿಕ್ಕಿತು. ಅದರ ಬೆನ್ನಲ್ಲೇ ಮದುವೆಗೆ ಬಂದಿದ್ದ ಸುಮೀರ್, ವಧುವನ್ನು ಮದುವೆಯಾಗುವ ಇಚ್ಛೆಯನ್ನು ತಿಳಿಸಿದ್ದಾನೆ. ಬಳಿಕ ಎರಡು ಮನೆಯವರು ಒಪ್ಪಿ ನದ್ವತ್ ನಗರದ ಕೆಕೆಪಿಜೆ ಸಭಾಂಗಣದಲ್ಲಿ ಮೌಲ್ವಿ ನೇತೃತ್ವದಲ್ಲಿ ವಿವಾಹ ನೆರವೇರಿಸಿದರು.