ನವದೆಹಲಿ: ಅದಾನಿ ಗದ್ದಲ ಸೋಮವಾರ ಸಂಸತ್ತಿನ ಉಭಯ ಕಲಾಪಗಳಲ್ಲಿ ಪ್ರತಿಧ್ವನಿಸಿದ ಪರಿಣಾಮ ಕಲಾಪವನ್ನು ಮಧ್ಯಾಹ್ನ 2ಗಂಟೆಯ ವರೆಗೂ ಮುಂದೂಡಲಾಯಿತು.
ಜಂಟಿಅಧಿವೇಶನದಲ್ಲಿ ರಾಷ್ಟ್ರಪತಿಯವರು ಮಾಡಿದ ಭಾಷಣಕ್ಕೆ ವಂದನೆ ಸಲ್ಲಿಸುವ ನಿರ್ಣಯದ ಮೇಲೆ ಚರ್ಚೆ ಆರಂಭವಾಗುತ್ತಿದ್ದಂತೆ ವಿರೋಧ ಪಕ್ಷಗಳು ಅದಾನಿ ಸಮೂಹವು ಅಕ್ರಮವಾಗಿ ಷೇರುಗಳ ಮೌಲ್ಯ ಏರಿಕೆ/ಇಳಿಕೆ ಮಾಡಿದೆ ಎನ್ನಲಾದ ಪ್ರಕರಣದ ಬಗ್ಗೆ ಚರ್ಚೆ ನಡೆಯಬೇಕು ಎಂದು ಗದ್ದಲ ಮಾಡಿದವು.
ಈ ಪರಿಣಾಮ ಲೋಕಸಭೆ ಹಾಗೂ ರಾಜ್ಯಸಭೆ ಕಲಾಪವನ್ನು ಮಧ್ಯಾಹ್ನ 2 ಗಂಟೆಯವರೆಗೂ ಮುಂದೂಡಲಾಯಿತು.
ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ಸದನ ಆರಂಭವಾಗುತ್ತಿದ್ದಂತೆ ಅದಾನಿ ಸಮೂಹ ಪ್ರಕರಣದ ಚರ್ಚಗೆ ಅವಕಾಶ ಮಾಡಿಕೊಡಬೇಕು ಎಂದು ಆಗ್ರಹಿಸಿದರು. ಈ ವೇಳೆ ವಿರೋಧ ಪಕ್ಷಗಳು ಗದ್ದಲ ಮಾಡಿದ್ದರಿಂದ ಸದನವನ್ನು ಮುಂದೂಡಲಾಯಿತು.
ಲೋಕಸಭೆಯಲ್ಲಿ ಸಹ ಕಾಂಗ್ರೆಸ್ ಹಾಗೂ ಟಿಎಂಸಿ ಪಕ್ಷಗಳು ಅದಾನಿ ಸಮೂಹ ಪ್ರಕರಣದ ಚರ್ಚಗೆ ಅವಕಾಶ ಕಲ್ಪಿಸಬೇಕು ಹಾಗೂ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿಯ ಮೇಲ್ವಿಚಾರಣೆಯಲ್ಲಿ ತನಿಖೆ ನಡೆಸಬೇಕು ಎಂದು ಆಗ್ರಹಿಸಿ ಸದನದಲ್ಲಿ ಪ್ರತಿಭಟನೆ ಮಾಡಿದ್ದರಿಂದ ಕಲಾಪ ಮುಂದೂಡಲಾಯಿತು.
ಅದಾನಿ ಪ್ರಕರಣಕ್ಕೆ ಸಂಬಂಧಿಸಿದಂತೆ ಸರ್ಕಾರದ ಮೇಲಿನ ವಾಗ್ದಾಳಿಯನ್ನು ಕಾಂಗ್ರೆಸ್ ತೀವ್ರಗೊಳಿಸಿದೆ. ಇನ್ನು ಕೆಲವು ವಿರೋಧ ಪಕ್ಷಗಳಲ್ಲಿ ಚರ್ಚೆಗೆ ಸಹಮತ ವ್ಯಕ್ತವಾಗಿಲ್ಲ.