ನವದೆಹಲಿ : ದೇಶದ್ರೋಹವು ಯಾವಾಗಲೂ ಎಲ್ಲ ಪತ್ರಿಕೋದ್ಯಮ ಸಾಹಸಗಳ ಪಾಲಿಗೆ ಬಗಲಿನಲ್ಲಿಯ ಮುಳ್ಳಾಗಿದೆ ಎಂದು ಭಾರತದ ಮಾಜಿ ಮುಖ್ಯ ನ್ಯಾಯಾಧೀಶ (ಸಿಜೆಐ) ಯು.ಯು.ಲಲಿತ್ ಅವರು ಹೇಳಿದ್ದಾರೆ.
ಶುಕ್ರವಾರ ಇಂಟರ್ನ್ಯಾಷನಲ್ ಪ್ರೆಸ್ ಇನ್ಸ್ಟಿಟ್ಯೂಟ್ ನ ಪತ್ರಿಕೋದ್ಯಮದಲ್ಲಿ ಶ್ರೇಷ್ಠತೆಗಾಗಿ 2022ನೇ ಸಾಲಿನ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಮಾತನಾಡಿದ ಸಂದರ್ಭ ಅವರು ಈ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.ಸ್ವಾತಂತ್ರ ಹೋರಾಟಗಾರ ಬಾಲ ಗಂಗಾಧರ ಟಿಳಕ್ರನ್ನು ಉಲ್ಲೇಖಿಸಿದ ಅವರು,ನ್ಯಾಯಯುತವಾದ ಟೀಕೆ ಪ್ರತಿಯೊಬ್ಬ ವ್ಯಕ್ತಿಯ ಹಕ್ಕು ಆಗಿದೆ,ಅದು ಪ್ರತಿಯೊಬ್ಬ ಪತ್ರಕರ್ತ ಪಾಲಿಸಬೇಕಾದ ಹಕ್ಕು ಆಗಿದೆ ಎಂದು ಹೇಳಿದರು.
ಬ್ರಿಟಿಷ್ ಆಡಳಿತವು ತನ್ನ ವಿರುದ್ಧ ದೇಶದ್ರೋಹದ ಆರೋಪವನ್ನು ಹೊರಿಸಿದ್ದಾಗ ಟಿಳಕ್ ನ್ಯಾಯಾಲಯದಲ್ಲಿ ತನ್ನನ್ನು ಸಮರ್ಥಿಸಿಕೊಂಡಿದ್ದರು. ಆದರೂ ಅವರನ್ನು ದೇಶದ್ರೋಹ ಕಾನೂನಿನಡಿ ದೋಷಿ ಎಂದು ಘೋಷಿಸಿದ್ದ ನ್ಯಾಯಾಲಯವು ಆರು ವರ್ಷಗಳ ಜೈಲು ಶಿಕ್ಷೆಯನ್ನು ವಿಧಿಸಿತ್ತು. 'ಸರಕಾರದ ನೀತಿಗಳು ಮತ್ತು ಕಾರ್ಯಗಳ ಬಗ್ಗೆ ಟೀಕಿಸಲು ನನಗೆ ಎಲ್ಲ ಹಕ್ಕು ಇದೆ. ನಾನು ಅದನ್ನು ಮಾಡಿದರೆ ಅದು ದೇಶದ್ರೋಹವಾಗುವುದಿಲ್ಲ. ದೇಶದ್ರೋಹ ಅದಕ್ಕಿಂತ ದೊಡ್ಡದು;ದಂಗೆಯನ್ನೆಬ್ಬಿಸಲು ಅಸಮಾಧಾನವನ್ನು ಪ್ರಚೋದಿಸುವದು. ಜನರ ಸಮಸ್ಯೆಗಳನ್ನು ಎತ್ತಿ ತೋರಿಸಲು ನಾನು ಏನನ್ನಾದರೂ ಮಾಡಿದರೆ ಅದು ದೇಶದ್ರೋಹವಲ್ಲ 'ಎಂದು ನ್ಯಾ.ಲಲಿತ್ ಹೇಳಿದರು.
ಕಳೆದ ವರ್ಷ,ಐಪಿಸಿಯ 124ಎ ಕಲಮ್ನಡಿಯ ವಸಾಹತುಶಾಹಿ ಯುಗದ ದೇಶದ್ರೋಹ ಕಾನೂನನ್ನು ಅಮಾನತಿನಲ್ಲಿರಿಸಿದ್ದ ಸರ್ವೋಚ್ಚ ನ್ಯಾಯಾಲಯವು,ಕಾನೂನನ್ನು ಪುನರ್ಪರಿಶೀಲಿಸುವವರೆಗೆ ಅದರಡಿ ಯಾವುದೇ ಹೊಸ ಪ್ರಕರಣಗಳನ್ನು ದಾಖಲಿಸದಂತೆ ಕೇಂದ್ರ ಮತ್ತು ರಾಜ್ಯ ಸರಕಾರಗಳಿಗೆ ಸೂಚಿಸಿತ್ತು.
ಹಲವಾರು ಪತ್ರಕರ್ತರು,ಸಾಮಾಜಿಕ ಕಾರ್ಯಕರ್ತರು ಮತ್ತು ರಾಜಕೀಯ ನಾಯಕರೂ ದೇಶದ್ರೋಹ ಕಾನೂನಿನ ಪರಿಶೀಲನೆಯನ್ನು ಕೊರಿ ಸರ್ವೋಚ್ಚ ನ್ಯಾಯಾಲಯದಲ್ಲಿ ಅರ್ಜಿಗಳನ್ನು ಸಲ್ಲಿಸಿದ್ದಾರೆ.