ಕೊಚ್ಚಿ: ಐಎಸ್ ಉಗ್ರ ಸಂಘಟನೆಗೆ ಸೇರುವ ಸಲುವಾಗಿ ಸಿರಿಯಾಗೆ ಪ್ರಯಾಣಿಸಲು ತಯಾರಿ ನಡೆಸಿದ್ದ ಮೂವರು ದೋಷಿಗಳಿಗೆ ಜಾಮೀನು ನೀಡಲು ಕೇರಳ ಹೈಕೋರ್ಟ್ ನಿರಾಕರಿಸಿದೆ. ಭಯೋತ್ಪಾದನೆಯು ಪಾಪಕೃತ್ಯವಾಗಿದ್ದು, ಜನ ಜೀವನ ಮತ್ತು ಸ್ವಾತಂತ್ರ್ಯಕ್ಕೆ ಧಕ್ಕೆ ತರುತ್ತದೆ ಮತ್ತು ದೇಶದ ಬೆಳವಣಿಗೆಗೆ ಕುಂದುಂಟು ಮಾಡುತ್ತದೆ ಎಂದು ಹೈಕೋರ್ಟ್ ಇದೇ ವೇಳೆ ಹೇಳಿದೆ.
ದೋಷಿಗಳಾದ ಮಿದ್ಲಾಜ್, ಅಬ್ದುಲ್ ರಝಾಕ್ ಮತ್ತು ಹಂಝ ಎಂಬುವವರು ಈಗಾಗಲೇ ಜೈಲು ಶಿಕ್ಷೆಗೆ ಒಳಗಾಗಿದ್ದು, ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದರು. ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಅಲೆಕ್ಸಾಂಡರ್ ಥಾಮಸ್ ಮತ್ತು ಸೋಫಿ ಥಾಮಸ್ ಅವರಿದ್ದ ಪೀಠವು ಶಿಕ್ಷೆ ವಜಾಗೊಳಿಸಿ, ಜಾಮೀನು ಮಂಜೂರು ಮಾಡಲು ನಿರಾಕರಿಸಿತು.
'ಅರ್ಜಿದಾರರ ಎಸಗಿರುವ ಅಪರಾಧದ ತೀವ್ರತೆಯು ಮೇಲ್ನೋಟಕ್ಕೆ ಸಾಬೀತಾಗಿದೆ. ಅವರಿಗೆ ವಿಧಿಸಲಾಗಿದ್ದ ಶಿಕ್ಷೆ ಅವಧಿಯಲ್ಲಿ ಬಹುಪಾಲು ಅವಧಿ ಮುಗಿದಿದೆ. ಆದರೂ ಅವರನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಲು ನಮಗೆ ಒಪ್ಪಿಗೆಯಿಲ್ಲ' ಎಂದು ಪೀಠವು ಫೆಬ್ರುವರಿ 10ರಂದು ಹೇಳಿದೆ. ದೋಷಿಗಳ ವಿರುದ್ಧ ದಾಖಲಾಗಿರುವ ಮೊಕದ್ದಮೆಯು 'ಗಂಭೀರ ಸ್ವರೂಪದ್ದು' ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ.
ಯಾವ ಧರ್ಮವೂ ಭಯೋತ್ಪಾದನೆಯನ್ನು ಮತ್ತು ದ್ವೇಷವನ್ನು ಪ್ರಚುರಪಡಿಸುವುದಿಲ್ಲ. ಆದರೆ ಕೆಲ ಧರ್ಮಾಂಧರು ಮತ್ತು ಮೂಲಭೂತವಾದಿಗಳು ದ್ವೇಷವನ್ನು ಬಿತ್ತುವ ಸಲುವಾಗಿ ಧರ್ಮದ ಉದ್ದೇಶಗಳನ್ನು ನಾಶ ಮಾಡುತ್ತಿದ್ದಾರೆ ಎಂದು ಪೀಠ ಅಭಿಪ್ರಾಯಪಟ್ಟಿತು.
ಆರು ಆರೋಪಿಗಳು ಐಎಸ್‌ಗೆ ಸೇರಲು ತಯಾರಿ ನಡೆಸಿದ್ದರು. ಅವರಲ್ಲಿ ಮಿದ್ಲಾಜ್ ಮತ್ತು ರಝಾಕ್‌ರನ್ನು ಟರ್ಕಿ ಆಡಳಿತ ವಶಕ್ಕೆ ತೆಗೆದುಕೊಂಡಿತ್ತು. ಇದೇ ಪ್ರಕರಣದ ಮತ್ತೊಬ್ಬ ಆರೋಪಿಯನ್ನು ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಂಧಿಸಲಾಗಿದೆ ಎಂದು ತಿಳಿದ ಹಂಝ ತನ್ನ ವಿಮಾನ ಟಿಕಟ್‌ಅನ್ನು ರದ್ದುಪಡಿಸಿದ್ದನು. ಬಳಿಕ ಪೊಲೀಸರು ಆತನನ್ನು ಬಂಧಿಸಿದ್ದರು.
2017ರ ಅಕ್ಟೋಬರ್ 25ರಂದು ಇವರ ಬಂಧನವಾಗಿತ್ತು. 2022ರ ಜುಲೈ 15ರಂದು ಇವರಿಗೆ ಶಿಕ್ಷೆ ವಿಧಿಸಲಾಗಿತ್ತು.