ತಿರುವನಂತಪುರ: ಅಪಘಾತದಿಂದ ಗಾಯಗೊಂಡ ಮಹಿಳೆಯು, ಗೃಹಿಣಿ ಎನ್ನುವ ಕಾರಣಕ್ಕೆ ಪರಿಹಾರ ನೀಡಲು ನಿರಾಕರಿಸಿದ ಕೇರಳ ರಸ್ತೆ ಸಾರಿಗೆ ನಿಗಮದ ವಾದದ ಕುರಿತು ಎಂದು ಕೇರಳ ಹೈಕೋರ್ಟ್ ತರಾಟೆಗೆ ತೆಗೆದುಕೊಂಡಿದೆ.
ಕೇರಳ ರಸ್ತೆ ಸಾರಿಗೆ ನಿಗಮದ ವಾದವನ್ನು 'ಅತಿರೇಕ' ಎಂದು ಕರೆದಿರುವ ನ್ಯಾಯಾಲಯವು, ಪರಿಹಾರ ನೀಡುವಲ್ಲಿ ಉದ್ಯೋಗಸ್ಥ ಮಹಿಳೆ, ಗೃಹಿಣಿ ಎಂಬೆಲ್ಲಾ ಮಾನದಂಡಗಳನ್ನು ಇರಿಸಿಕೊಳ್ಳಬಾರದು ಎಂದಿತು.ಮಹಿಳೆಗೆ ₹1.65 ಲಕ್ಷ ಪರಿಹಾರ ನೀಡಬೇಕು ಎಂದೂ ಆದೇಶಿಸಿತು.
'ಕುಟುಂಬಕ್ಕಾಗಿ ಆಕೆ ತನ್ನೆಲ್ಲಾ ಸಮಯವನ್ನು ಮೀಸಲಿಡುತ್ತಾಳೆ. ಮಕ್ಕಳ ಉತ್ತಮ ಭವಿಷ್ಯಕ್ಕಾಗಿ ಶ್ರಮಿಸುತ್ತಾಳೆ. ಆದಾಯದ ಪ್ರತಿಫಲಾಪೇಕ್ಷೆ ಬಯಸದೇ ಮಾಡುವ ಈ ಎಲ್ಲಾ ಕಾರ್ಯಗಳನ್ನು ಕ್ಷುಲ್ಲಕವಾಗಿ ಕಾಣಲು ಸಾಧ್ಯವಿಲ್ಲ' ಎಂದು ನ್ಯಾಯಮೂರ್ತಿ ದೇವನ್ ರಾಮಚಂದ್ರನ್ ಅವರು ಅಭಿಪ್ರಾಯಪಟ್ಟರು.
ಪ್ರಕರಣವೇನು?: ಕೇರಳದ ಸರ್ಕಾರಿ ಬಸ್ ಚಾಲಕನ ನಿರ್ಲಕ್ಷ್ಯದಿಂದಾಗಿ 2006ರಲ್ಲಿ ಅಪಘಾತ ಸಂಭವಿಸಿತ್ತು. ಅಪಘಾತದಲ್ಲಿ ಮಹಿಳೆಯ ಬೆನ್ನುಮೂಳೆಗೆ ಗಂಭೀರ ಗಾಯಗಳಾಗಿತ್ತು. ಹಲವು ತಿಂಗಳುಗಳ ಕಾಲ ಮಹಿಳೆ ಹಾಸಿಗೆ ಹಿಡಿದಿದ್ದರು. ಆದ್ದರಿಂದ ಮಹಿಳೆಯು ತಮಗೆ ₹2 ಲಕ್ಷ ಪರಿಹಾರ ನೀಡಬೇಕು ಎಂದು ಬಯಸಿದ್ದರು. ಆದರೆ, ಮಹಿಳೆಗೆ ₹40 ಸಾವಿರ ಪರಿಹಾರ ನೀಡಬೇಕು ವಾಹನ ಅಪಘಾತ ಪರಿಹಾರ ನ್ಯಾಯಮಂಡಳಿ ಆದೇಶ ನೀಡಿತ್ತು. ಇದನ್ನು ಪ್ರಶ್ನಿಸಿ ಮಹಿಳೆಯು ಕೇರಳ ಹೈಕೋರ್ಟ್ ಮೆಟ್ಟಿಲೇರಿದ್ದರು.
ಮಹಿಳೆಯ ಮೇಲ್ಮನವಿಗೆ ಆಕ್ಷೇಪ ವ್ಯಕ್ತಪಡಿಸಿದ ಕೇರಳ ರಸ್ತೆ ಸಾರಿಗೆ ನಿಗಮವು, 'ಮಹಿಳೆಯು ಗೃಹಿಣಿಯಾಗಿದ್ದಾರೆ. ಆಕೆಗೆ ಆದಾಯವಿಲ್ಲ. ಆದ್ದರಿಂದ ಆಕೆಗೆ ಹೆಚ್ಚಿನ ಪರಿಹಾರ ನೀಡಲು ಸಾಧ್ಯವಿಲ್ಲ' ಎಂದು ಹೇಳಿತ್ತು.