ನವದೆಹಲಿ: ಛತ್ತೀಸ್‌ಗಢದ ರಾಯ್‌ಪುರದಲ್ಲಿ ಇದೇ 24ರಿಂದ ಆರಂಭವಾಗಲಿರುವ ಕಾಂಗ್ರೆಸ್ ಮಹಾಧಿವೇಶನದಲ್ಲಿ ದೇಶದ ಪೂರ್ವದಿಂದ ಪಶ್ಚಿಮದ ಭಾಗಗಳಿಗೆ 'ಭಾರತ್ ಜೋಡೊ ಯಾತ್ರೆ' ಮಾದರಿಯ ಮತ್ತೊಂದು ಯಾತ್ರೆಯನ್ನು ಘೋಷಿಸುವ ಸಾಧ್ಯತೆ ಇದೆ.
ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ನೇತೃತ್ವದಲ್ಲಿ ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ನಡೆದ 150 ದಿನಗಳ ಪಾದಯಾತ್ರೆ ಯಶಸ್ವಿಯಾದ ಬೆನ್ನಲ್ಲೇ ಇದೇ ಮಾದರಿಯಲ್ಲಿ ಇನ್ನೊಂದು ಯಾತ್ರೆ ಆರಂಭಿಸಲು ದೇಶದ ವಿವಿಧೆಡೆಯಿಂದ ಬೇಡಿಕೆಗಳು ವ್ಯಕ್ತವಾಗಿವೆ ಎಂದು ಮೂಲಗಳು ತಿಳಿಸಿವೆ.
ಅರುಣಾಚಲ ಪ್ರದೇಶದಿಂದ ಮಹಾತ್ಮ ಗಾಂಧಿಯವರ ಜನ್ಮ ಸ್ಥಳವಾದ ಗುಜರಾತಿನ ಪೋರಬಂದರ್‌ವರೆಗೆ ಯಾತ್ರೆಯನ್ನು ಹಮ್ಮಿಕೊಳ್ಳುವ ಯೋಜನೆ ಪಕ್ಷಕ್ಕೆ ಇದೆ.
ಕಳೆದ ವರ್ಷ ಕನ್ಯಾಕುಮಾರಿಯಿಂದ ಆರಂಭವಾಗಿದ್ದ 'ಭಾರತ್ ಜೋಡೊ ಯಾತ್ರೆ'ಯು ಮಹಾತ್ಮ ಗಾಂಧಿ ಹುತಾತ್ಮರಾದ ದಿನವಾದ ಜನವರಿ 30ರಂದು ಕಾಶ್ಮೀರದಲ್ಲಿ ಕೊನೆಗೊಂಡಿತ್ತು.
ಪೂರ್ವದಿಂದ ಪಶ್ಚಿಮಕ್ಕೆ ಸಾಗುವ ಯಾತ್ರೆಯು ಭಾರತ್ ಜೋಡೊ ಯಾತ್ರೆಯ ರೀತಿ ನಿರಂತರ ಯಾತ್ರೆಯಾಗುವ ಸಾಧ್ಯತೆ ಇಲ್ಲ.
ಇದು ಚುನಾವಣಾ ವರ್ಷವಾಗಿರುವ ಕಾರಣ ಪಕ್ಷವು ತನ್ನ ದೈನಂದಿನ ಸಂಘಟನಾ ಮತ್ತು ಚುನಾವಣಾ ಕೆಲಸಗಳಿಗೆ ಹೆಚ್ಚಿನ ಗಮನ ಹರಿಸಬೇಕಿದೆ. ಯಾತ್ರೆಯು ಕಡಿಮೆ ಸಂಖ್ಯೆಯ ಕಾಯಂ ಯಾತ್ರಿಗಳೊಂದಿಗೆ ಹೈಬ್ರಿಡ್ ಮಾದರಿಯಲ್ಲಿ ಇರುತ್ತದೆ ಎಂದು ಮೂಲಗಳು ತಿಳಿಸಿವೆ.
ಈ ಸಂಭವನೀಯ ಯಾತ್ರೆಯ ಕುರಿತು ಮಹಾಧಿವೇಶನದಲ್ಲಿ ಚರ್ಚೆ ನಡೆಯಬಹುದು. ಈ ವೇಳೆ ಪ್ರತಿನಿಧಿಗಳು ವ್ಯಾಪಕ ಬೆಂಬಲ ವ್ಯಕ್ತಪಡಿಸಿದರೆ ಯಾತ್ರೆ ನಡೆಯುವುದು ಬಹುತೇಕ ಖಚಿತವಾಗುತ್ತದೆ.
ಜೋಡೊ ಯಾತ್ರೆ ಬಳಿಕ 'ಹಾಥ್ ಸೆ ಹಾಥ್ ಜೋಡೊ' (ಒಟ್ಟಿಗೆ ಕೈಜೋಡಿಸುವಿಕೆ) ಯಾತ್ರೆ ಆರಂಭವಾಗಿದೆ. ಅದನ್ನು ಈ ಮಹಾಧಿವೇಶನದ ಅಡಿಬರಹವಾಗಿ ಇಟ್ಟುಕೊಳ್ಳಲಾಗುತ್ತದೆ ಎಂದು ಮೂಲಗಳು ಹೇಳಿವೆ.