ಎರ್ನಾಕುಲಂ: ಬಾಯ್ಫ್ರೆಂಡ್ಗೆ ಸ್ಮಾರ್ಟ್ಫೋನ್ ಕೊಡಿಸಲು 59 ವರ್ಷದ ಮಹಿಳೆಯೊಬ್ಬಳ ಮೇಲೆ ಸುತ್ತಿಗೆಯಿಂದ ಹಲ್ಲೆ ಮಾಡಿ ಚಿನ್ನದ ಸರ ಮತ್ತು ಕಿವಿಯೋಲೆ ಎಗರಿಸಿದ ಪಿಯು ವಿದ್ಯಾರ್ಥಿನಿಯನ್ನು ಕೇರಳ ಪೊಲೀಸರು ಬಂಧಿಸಿದ್ದಾರೆ.
ಜಲಜಾ (59) ಹಲ್ಲೆಗೊಳಗಾದ ಮಹಿಳೆ.
ಈಕೆ ಎರ್ನಾಕುಲಂನ ಮುವತ್ತುಪುಳದ ಸೌಥ್ ಪೈಪ್ರಾ ಕಾಲನಿಯ ನಿವಾಸಿ. ಈ ಘಟನೆ ನಿನ್ನೆ (ಫೆ.7) ಮಧ್ಯಾಹ್ನ ನಡೆದಿದೆ.
ಜಲಜಾ ಅವರು ಮನೆಯಲ್ಲಿ ಒಂಟಿಯಾಗಿದ್ದಾಗ ಸುತ್ತಿಗೆ ಸಮೇತ ಒಳಗಡೆ ನುಗ್ಗಿದ ಹುಡುಗಿ, ತಲೆಗೆ ಸುತ್ತಿಗೆಯಿಂದ ಹೊಡೆದು, ಚಿನ್ನದ ಸರ ಮತ್ತು ಕಿವಿಯೋಲೆ ಕಸಿದು ಪರಾರಿಯಾಗಿದ್ದಾಲೆ. ಗಾಯಗೊಂಡಿದ್ದ ಜಲಜಾ, ಘಟನೆಯ ಬಗ್ಗೆ ಸ್ಥಳೀಯರಿಗೆ ಮಾಹಿತಿ ನೀಡಿದ್ದಾರೆ. ಬಳಿಕ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದು, ಸ್ಥಳಕ್ಕೆ ಆಗಮಿಸಿದ ಪೊಲೀಸರು ಮಾಹಿತಿ ಪಡೆದು ಪ್ರಕರಣ ದಾಖಲಿಸಿಕೊಂಡಿದ್ದರು.
ಜಲಜಾ ನೀಡಿದ ಮಾಹಿತಿ ಆಧಾರದ ಮೇಲೆ ಹುಡುಗಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ, ಆಕೆ ತಪ್ಪೊಪ್ಪಿಕೊಂಡಿದ್ದಾಳೆ. ತನ್ ಬಾಯ್ಫ್ರೆಂಡ್ಗೆ ಸ್ಮಾರ್ಟ್ಫೋನ್ ಉಡುಗೊರೆ ನೀಡುವುದಕ್ಕಾಗಿ ಕೃತ್ಯ ಎಸಗಿದ್ದಾಗಿ ಒಪ್ಪಿಕೊಂಡಿದ್ದಾಳೆ. ಸದ್ಯ ಆಕೆಯನ್ನು ಬಂಧಿಸಲಾಗಿದೆ. ಗಾಯಗೊಂಡಿರುವ ಜಲಜಾಗೆ ಕೊಟ್ಟಾಯಂ ಮೆಡಿಕಲ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.