ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ಅವಹೇಳನಕಾರಿ
ಹೇಳಿಕೆ ನೀಡಿದ ಪ್ರಕರಣದಲ್ಲಿ ಅಸ್ಸಾಂ ಪೊಲೀಸರಿಂದ ಬಂಧನಕ್ಕೊಳಗಾಗಿದ್ದ ಕಾಂಗ್ರೆಸ್
ನಾಯಕ ಪವನ್ ಖೇರಾ ಅವರಿಗೆ ದೆಹಲಿ ನ್ಯಾಯಾಲಯ ಗುರುವಾರ ಫೆಬ್ರವರಿ 28ರವರೆಗೆ ಮಧ್ಯಂತರ
ಜಾಮೀನು ಮಂಜೂರು ಮಾಡಿದೆ.
ಮುಖ್ಯ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ಅರ್ಚನಾ ಬೇನಿವಾಲ್ ಅವರು ಖೇರಾ ಅವರಿಗೆ
30,000 ರೂಪಾಯಿಗಳ ಬಾಂಡ್ ಮತ್ತು ಅದೇ ಮೊತ್ತದ ಒಂದು ಶ್ಯೂರಿಟಿ ಮೇಲೆ ಮಧ್ಯಂತರ ಜಾಮೀನು
ನೀಡಿದ್ದಾರೆ.
ಖೇರಾ ಅವರನ್ನು ಮಧ್ಯಂತರ ಜಾಮೀನಿನ ಮೇಲೆ ಬಿಡುಗಡೆ ಮಾಡುವಂತೆ ಸುಪ್ರೀಂ ಕೋರ್ಟ್ ನೀಡಿದ ಆದೇಶದ ಪ್ರತಿಯನ್ನು ಸ್ವೀಕರಿಸಿದ ನಂತರ ಮ್ಯಾಜಿಸ್ಟ್ರೇಟ್ ಅರ್ಚನಾ ಅವರು ಸಂಜೆ 6.10 ರ ಸುಮಾರಿಗೆ ಈ ಆದೇಶ ನೀಡಿದ್ದಾರೆ.
ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್ ನೇತೃತ್ವದ ತ್ರಿಸದಸ್ಯ ಪೀಠ, ಅಸ್ಸಾಂನಲ್ಲಿ ದಾಖಲಾಗಿರುವ ಪ್ರಕರಣದಲ್ಲಿ ಖೇರಾ ಅವರಿಗೆ ಫೆಬ್ರವರಿ 28 ರವರೆಗೆ ಮಧ್ಯಂತರ ಜಾಮೀನು ನೀಡುವಂತೆ ಆದೇಶ ನೀಡಿತ್ತು.
ಪ್ರಧಾನಿ ಮೋದಿ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ ಆರೋಪದ ಮೇಲೆ ಕಾಂಗ್ರೆಸ್ ನಾಯಕ ಖೇರಾ ಅವರನ್ನು ದೆಹಲಿ ವಿಮಾನ ನಿಲ್ದಾಣದಲ್ಲಿ ದೆಹಲಿ-ರಾಯಪುರ ವಿಮಾನದಿಂದ ಕೆಳಗಿಳಿದ ಬಳಿಕ ಗುರುವಾರ ಅಸ್ಸಾಂ ಪೊಲೀಸರು ಬಂಧಿಸಿದ್ದಾರೆ. ಬಳಿಕ ಪವನ್ ಖೇರಾ ಅವರು ಜಾಮೀನು ಕೋರಿ ಸುಪ್ರೀಂ ಕೋರ್ಟ್ ಗೆ ಮನವಿ ಸಲ್ಲಿಸಿದ್ದರು.
"ಹೆಸರು ಮಾತ್ರ ದಾಮೋದರದಾಸ್ ಮೋದಿ. ಆದರೆ ಅವರು ಮಾಡುವ ಕೆಲಸಗಳು ಮಾತ್ರ ಗೌತಮದಾಸ್ ಅವರದ್ದು" ಎಂದು ಖೇರಾ ಪ್ರಧಾನಿ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ್ದರು.