ನವದೆಹಲಿ: 'ಕೋರ್ಟ್ ರಿಜಿಸ್ಟ್ರಿ ವಿರುದ್ಧ ಬೇಜವಾಬ್ದಾರಿಯುತವಾಗಿ ಆರೋಪ ಮಾಡುವುದು ಸುಲಭ. ಈ ಭೂಮಿ ಮೇಲೆ ಯಾರನ್ನೂ ಬೇಕಾದರೂ ಟೀಕಿಸಲು ನಿಮಗೆ ಸ್ವಾತಂತ್ರ್ಯವಿದೆ. ಆದರೆ, ಪ್ರಕರಣಗಳ ವಿಚಾರಣೆ ಪಟ್ಟಿಯಲ್ಲಿ ನಾವು ಶಿಸ್ತು ಪಾಲಿಸಲೇಬೇಕಾಗುತ್ತದೆ' ಎಂದು ಸುಪ್ರೀಂ ಕೋರ್ಟ್, ಬುಧವಾರ ವಕೀಲರಿಗೆ ಖಡಕ್ಕಾಗಿ ಹೇಳಿದೆ.
ತಮಿಳುನಾಡಿನ 'ಉದ್ಯೋಗಕ್ಕಾಗಿ ಲಂಚ' ಹಗರಣಕ್ಕೆ ಸಂಬಂಧಿಸಿದ ಪ್ರಕರಣಗಳ ವಿಚಾರಣೆ ಪಟ್ಟಿ ವಿಷಯದಲ್ಲಿ ವಕೀಲರು ಎತ್ತಿದ ಪ್ರಶ್ನೆಗೆ ಮುಖ್ಯನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್ ಅವರಿದ್ದ ಪೀಠವು ಈ ರೀತಿ ಹೇಳಿದೆ.
ನಿಯಮಗಳ ಉಲ್ಲಂಘನೆಯಿಂದಾಗಿ ಪ್ರಕರಣವನ್ನು ಮತ್ತೊಂದು ಪೀಠದ ಮುಂದೆ ವಿಚಾರಣೆಗೆ ಪಟ್ಟಿ ಮಾಡಿರುವ ನ್ಯಾಯಾಲಯದ ರಿಜಿಸ್ಟ್ರಿಯ ಕ್ರಮವನ್ನು ಹಿರಿಯ ವಕೀಲರು ಪ್ರಶ್ನಿಸಿದಾಗ, ಮುಖ್ಯನ್ಯಾಯಮೂರ್ತಿಗಳು ರಿಜಿಸ್ಟ್ರಿ ನಿಯಮ ಸಮರ್ಥಿಸಿಕೊಂಡರು.
ವಕೀಲ ಪ್ರಶಾಂತ್ ಭೂಷಣ್ ಅವರು ಕಳೆದ ಸೆಪ್ಟೆಂಬರ್‌ನಲ್ಲಿ ನ್ಯಾಯಮೂರ್ತಿ ಎಸ್. ಅಬ್ದುಲ್ ನಜೀರ್ ( ಈಗ ನಿವೃತ್ತ) ಮತ್ತು ವಿ. ರಾಮಸುಬ್ರಮಣಿಯನ್ ಅವರಿದ್ದ ಪೀಠವು, ಮದ್ರಾಸ್ ಹೈಕೋರ್ಟ್ ತೀರ್ಪು ವಜಾಗೊಳಿಸಿ, ಡಿಎಂಕೆ ಶಾಸಕ ವಿ. ಸೆಂಥಿಲ್ ಬಾಲಜಿ ವಿರುದ್ಧದ ಕ್ರಿಮಿನಲ್ ಆರೋಪಗಳನ್ನು ಮರುಸ್ಥಾಪಿಸಿದ್ದಾರೆ ಎಂದು ವಾದಿಸಿದರು.
ಉಳಿದ ಪ್ರಕರಣಗಳಲ್ಲಿ ಹೈಕೋರ್ಟ್ ನೀಡಿರುವ ತಡೆಯಾಜ್ಞೆ ಆದೇಶಗಳ ತೆರವಿಗೆ ಪೊಲೀಸರು ಮುಂದಾಗಬೇಕು ಎಂದು ಪೀಠವು ನಿರ್ದೇಶನವನ್ನೂ ನೀಡಿತ್ತು. ಅದನ್ನು ಮಾಡುವ ಬದಲು, ಆರೋಪಿಗಳಿಗೆ ನೆರವಾಗಲು ಪೊಲೀಸರು ಡಿ-ನೊವಾ (ಮೊದಲಿನಿಂದ ತನಿಖೆ ನಡೆಸುವುದು) ತನಿಖೆಗೆ ಹೈಕೋರ್ಟ್ ಮುಂದೆ ಒಪ್ಪಿಕೊಂಡರು. ಇದಕ್ಕೆ ಕೋರ್ಟ್ ಅನುಮತಿಸಿತು. ಇದನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಲಾಗಿದೆ ಎಂದರು.
ಆಗ, ಹಿರಿಯ ವಕೀಲರಾದ ದುಶ್ಯಂತ್ ದವೆ ಮತ್ತು ಕಪಿಲ್ ಸಿಬಲ್ ಅವರು ಪ್ರಕರಣದ ವಿಚಾರಣೆಯ ಪಟ್ಟಿ ಬಗ್ಗೆ ಪೀಠಕ್ಕೆ ದೂರು ನೀಡಿದರು. ಪ್ರಕರಣಕ್ಕೆ ಸಂಬಂಧಿಸಿದ ಒಂದು ಅರ್ಜಿ ಪೀಠದಲ್ಲಿ ವಿಚಾರಣೆಯಲ್ಲಿರುವಾಗ, ಇದಕ್ಕೆ ಸಂಬಂಧಿಸಿದ ಇನ್ನೊಂದು ಅರ್ಜಿಯನ್ನು ಬೇರೆ ಪೀಠಕ್ಕೆ ಪಟ್ಟಿ ಮಾಡಿರುವುದನ್ನು ಆಕ್ಷೇಪಿಸಿದರು.
ಒಂದು ಪ್ರಕರಣಕ್ಕೆ ಸಂಬಂಧಿಸಿದ ಅರ್ಜಿಗಳು ಒಂದು ನ್ಯಾಯಾಲಯಕ್ಕೆ ಬಂದಾಗ ಅವು ನಿರ್ದಿಷ್ಟವಾದ ಒಂದೇ ಪೀಠದಲ್ಲಿ ವಿಚಾರಣೆಗೆ ರಿಜಿಸ್ಟ್ರಿ ಪಟ್ಟಿ ಮಾಡಬೇಕೆಂಬ ಕಡ್ಡಾಯ ನಿಯಮವಿದೆ. ಆದರೆ, ಇಲ್ಲಿ ಒಂದೇ ಪ್ರಕರಣ ಮತ್ತೊಂದು ಪೀಠದಲ್ಲಿ ನಡೆಯುತ್ತಿದೆ. ರಿಜಿಸ್ಟ್ರಿ ನಿಯಮವನ್ನು ತಪ್ಪದೇ ಪಾಲಿಸುವುದು ಕಡ್ಡಾಯ ಎಂದು ದವೆ ಒತ್ತಿಹೇಳಿದರು.
ಆಗ, ಮುಖ್ಯನ್ಯಾಯಮೂರ್ತಿ 'ನನ್ನ ಬಳಿ ಈಗ ಅದರ ದಾಖಲೆಗಳಿಲ್ಲ, ನಂತರ ಈ ಬಗ್ಗೆ ಪರಿಶೀಲಿಸೋಣ' ಎಂದರು.
'ನ್ಯಾಯಮೂರ್ತಿಗಳಾಗಿ ನಾವು ಈ ನ್ಯಾಯಾಲಯದ ಕೆಲವು ಶಿಸ್ತುಗಳನ್ನು ಪಾಲಿಸಬೇಕು. ನಾನು ಅದನ್ನು ಪಾಲಿಸುತ್ತಿದ್ದೇನೆ ಮತ್ತು ಪೀಠಕ್ಕೆ ವಹಿಸುತ್ತೇನೆ' ಎಂದರು.
'ನ್ಯಾಯಾಂಗಕ್ಕೆ ಅತ್ಯಂತ ಗೌರವ ನೀಡುತ್ತೇನೆ. ನ್ಯಾಯಮೂರ್ತಿಗಳ ಮಗನೆಂದ ಮೇಲೆ, ನನ್ನ ಟೀಕೆಗಳು ವ್ಯಕ್ತಿನಿಷ್ಠವಾಗಿರದೇ ವಸ್ತುನಿಷ್ಠವಾಗಿರಬೇಕು. ದವೆ ಅವರೇ ನಿಮ್ಮ ಟೀಕೆ ವಸ್ತುನಿಷ್ಠವಾಗಿದೆ ಎಂಬ ನಿಮ್ಮ ನಿಲುವು ವ್ಯಕ್ತಿನಿಷ್ಠವಾಗಿರಬಹುದು' ಎಂದು ಹೇಳಿದರು.
ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು, 'ಈ ವಿಚಾರದಲ್ಲಿ ಮುಖ್ಯ ನ್ಯಾಯಮೂರ್ತಿಗಳು ತೆಗೆದುಕೊಳ್ಳುವ ನಿರ್ಧಾರವನ್ನು ನಾವು ಸ್ವೀಕರಿಸುತ್ತೇವೆ. ತಾವು ಸೂಚಿಸುವ ಪೀಠದ ಮುಂದೆ ವಿಚಾರಣೆಗೆ ಸಮ್ಮತಿಸುತ್ತೇವೆ' ಎಂದು ಹೇಳಿದರು.