ತಿರುವನಂತಪುರಂ: ಯುವಕನೊಬ್ಬ ಬೈಕ್ನಲ್ಲಿ ವ್ಹೀಲಿಂಗ್ ಮಾಡುತ್ತಾ ಶಾಲಾ ವಿದ್ಯಾರ್ಥಿನಿಗೆ ಡಿಕ್ಕಿ ಹೊಡೆದಿರುವ ಘಟನೆ ತಿರುವನಂತಪುರಂನ ಕಲ್ಲಂಬಲಮ್ನಲ್ಲಿ ಭಾನುವಾರ (ಫೆ.12) ನಡೆದಿದೆ.
ಘಟನೆಗೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಆರೋಪಿ ಯುವಕನನ್ನು 18 ವರ್ಷದ ನೌಫಲ್ ಎಂದು ಗುರುತಿಸಲಾಗಿದೆ. ಅಪಾಯಕಾರಿ ಡ್ರೈವಿಂಗ್ ಸಂಬಂಧಿಸಿದಂತೆ ಯುವಕನ ವಿರುದ್ಧ 6 ಪ್ರಕರಣಗಳು ಈ ಹಿಂದೆಯೇ ದಾಖಲಾಗಿವೆ.
ವಿಡಿಯೋದಲ್ಲಿ ನೌಫಲ್ ತನ್ನ ಬೈಕ್‌ನ ಮುಂಭಾಗವನ್ನು ಎತ್ತುವ ಮೇಲಕ್ಕೆತ್ತಿ ವ್ಹೀಲಿಂಗ್ ಮಾಡುವ ಮೂಲಕ ಸಾಹಸ ಪ್ರದರ್ಶಿಸುತ್ತಿರುವುದನ್ನು ಕಾಣಬಹುದು. ಈ ವೇಳೆ ಇದ್ದಕ್ಕಿದ್ದಂತೆ ಸಮತೋಲನ ಕಳೆದುಕೊಂಡು ಕೆಳಗೆ ಬಿದ್ದು ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಬಾಲಕಿಗೆ ಡಿಕ್ಕಿ ಹೊಡೆದಿದ್ದಾನೆ.
ವರದಿಗಳ ಪ್ರಕಾರ ಘಟನೆಯಲ್ಲಿ ಬೈಕ್ ಸವಾರ ನೌಫಲ್ ಮತ್ತು ಶಾಲಾ ವಿದ್ಯಾರ್ಥಿನಿಗೆ ಗಾಯಗಳಾಗಿವೆ. ಇದೇ ಸಂದರ್ಭದಲ್ಲಿ ಮೋಟಾರು ವಾಹನ ಇಲಾಖೆ (ಎಂವಿಡಿ) ಬಾಲಕನ ಚಾಲನಾ ಪರವಾನಗಿಯನ್ನು ರದ್ದುಗೊಳಿಸುವುದಾಗಿ ತಿಳಿಸಿದೆ.