ನವದೆಹಲಿ: ಭೂಕಂಪ ಪೀಡಿತ ಟರ್ಕಿಗೆ ತಕ್ಷಣಕ್ಕೆ 2 ರಾಷ್ಟ್ರೀಯ ವಿಪತ್ತು ಪರಿಹಾರ ನಿಧಿ (ಎನ್‌ಡಿಆರ್‌ಎಫ್) ತಂಡಗಳು, ವೈದ್ಯಕೀಯ ತಂಡ ಮತ್ತು ಪರಿಹಾರ ಸಾಮಗ್ರಿಗಳನ್ನು ತಕ್ಷಣವೇ ಕಳುಹಿಸಲಾಗುವುದು ಎಂದು ಕೇಂದ್ರ ಸರ್ಕಾರ ಸೋಮವಾರ ತಿಳಿಸಿದೆ.
ಟರ್ಕಿಗೆ ಸಾಧ್ಯವಿರುವ ಎಲ್ಲ ಸಹಾಯ ಮಾಡುವಂತೆ ಪ್ರಧಾನಿ ನರೇಂದ್ರ ಮೋದಿ ಅವರ ಸೂಚನೆ ಮೇರೆಗೆ ಎನ್‌ಡಿಆರ್‌ಎಫ್, ವೈದ್ಯಕೀಯ ತಂಡ ಹಾಗೂ ಪರಿಹಾರ ಸಾಮಗ್ರಿಗಳನ್ನು ಕಳುಹಿಸಲಾಗುವುದು ಎಂದು ಪ್ರಧಾನಮಂತ್ರಿ ಕಚೇರಿಯ ಅಧಿಕಾರಿಗಳು ಹೇಳಿದ್ದಾರೆ.
ಟರ್ಕಿ ಭೂಕಂಪದ ಸುದ್ದಿ ಹೊರ ಬರುತ್ತಿದ್ದಂತೆ ಪ್ರಧಾನಿ ನರೇಂದ್ರ ಮೋದಿ ಅವರು ಟರ್ಕಿಗೆ ಅಗತ್ಯ ನೆರವು ನೀಡುವುದಾಗಿ ಪ್ರಕಟಿಸಿದ್ದರು.
ನೂರು ಸಿಬ್ಬಂದಿ ಇರುವ ಎರಡು ಎನ್‌ಡಿಆರ್‌ಎಫ್ ತಂಡ, ನರ್ಸ್‌ಗಳು, ವೈದ್ಯರು ಇರುವ ವೈದ್ಯಕೀಯ ತಂಡಗಳು ಹಾಗೂ ಪರಿಹಾರ ಸಾಮಗ್ರಿಗಳನ್ನು ವಿಶೇಷ ವಿಮಾನಗಳ ಮೂಲಕ ತಕ್ಷಣಕ್ಕೆ ಕಳುಹಿಸಲಾಗುವುದು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಟರ್ಕಿ ಹಾಗೂ ಸಿರಿಯಾ ದೇಶಗಳಲ್ಲಿ ಸಂಭವಿಸಿದ ಭೂಕಂಪಕ್ಕೆ 500ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದಾರೆ. ಟರ್ಕಿಯಲ್ಲಿ 284ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದು, 2,323 ಮಂದಿ ಗಾಯಗೊಂಡಿದ್ದಾರೆ.