ಕಾಸರಗೋಡು: ಗಡಿನಾಡು ಕಾಸರಗೋಡಿನ ಕನ್ನಡಿಗರಿಗೆ ಕೆಲವೊಂದು ಸರ್ಕಾರಿ ಉದ್ಯೋಗ ಮರೀಚಿಕೆಯಾಗುತ್ತಿರುವ ಮಧ್ಯೆ ಅಂಚೆ ಇಲಾಖೆಯ ಗ್ರಾಮೀಣ ಡಾಕ್ ಸೇವಕ್(ಜಿಡಿಎಸ್)ಹುದ್ದೆಗೆ ಕಾಸರಗೋಡಿನ ಕನ್ನಡಿಗರನ್ನೂ ಪರಿಗಣಿಸುವ ಬಗ್ಗೆ ಸಂಬಂಧಪಟ್ಟವರಿಂದ ಭರವಸೆ ಲಭಿಸಿದ್ದು, ಗಡಿನಾಡ ಕನ್ನಡಿಗರಲ್ಲಿ ಆಶಾಭಾವನೆ ಗರಿಗೆದರಿದೆ. ಸಾಮಾಜಿಕ ಕಾರ್ಯಕರ್ತ ಮುಳ್ಳೇರಿಯಾದ ವಿಷ್ಣುಪ್ರಕಾಶ್ ಅವರು ಚೆನ್ನೈನಲ್ಲಿರುವ ಕೇಂದ್ರ ಸರ್ಕಾರದ ಭಾಷಾ ಅಲ್ಪಸಂಖ್ಯಾತರ ಸಹಾಯಕ ಆಯುಕ್ತರ ಕಚೇರಿಗೆ ಸಲ್ಲಿಸಿದ ಮನವಿಗೆ ಸ್ಪಂದಿಸಿದ ಅಧಿಕಾರಿಗಳು ಕಾಸರಗೋಡಿನ ಕನ್ನಡಿಗರನ್ನೂ ಹುದ್ದೆಗೆ ಪರಿಗಣಿಸುವ ಬಗ್ಗೆ ಸಂಬಂಧಪಟ್ಟವರಿಗೆ ಮಾಹಿತಿ ನೀಡುವುದಾಗಿ ಉತ್ತರ ಲಭಿಸಿದೆ.
ಅಂಚೆ ಇಲಾಖೆಯ ವಿವಿಧ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಸಂದರ್ಭ ಕಾಸರಗೋಡಿನಲ್ಲಿ ಭಾಷಾ ಅಲ್ಪ ಸಂಖ್ಯಾತರಿಗಿರುವ ಸಂವಿಧಾನಾತ್ಮಕ ಸವಲತ್ತಿನ ಯಾವುದೇ ಪ್ರಯೋಜನ ಲಭ್ಯವಾಗುತ್ತಿಲ್ಲ. ಕಾಸರಗೋಡಿನ ಭಾಷಾ ಅಲ್ಪಸಂಖ್ಯಾತರಾಗಿರುವ ಕನ್ನಡಿಗರಿಗೂ ಅರ್ಹತೆಯಿರುವ ಜಿಡಿಎಸ್ ಹುದ್ದೆಗೆ ಆನ್‍ಲೈನ್ ಮೂಲಕ ಅರ್ಜಿ ಸಲ್ಲಿಸುವ ಸಂದರ್ಭ ಮಾತೃಭಾಷೆ ಕನ್ನಡವೆಂದು ನಮೂದಿಸಿದಲ್ಲಿ ಆಡಳಿತ ಭಾಷೆ ತಿಳಿದಿಲ್ಲವೆಂಬ ಕಾರಣದಿಂದ ಅನರ್ಹತೆಯ ಸಂದೇಶ ಲಭಿಸುತ್ತಿದೆ. ಕಾಸರಗೋಡು ಜಿಲ್ಲೆಯ ಕನ್ನಡಿಗರಿಗೆ ಸಂವಿಧಾನಾತ್ಮಕವಾಗಿ ಲಭಿಸಿರುವ ಸವಲತ್ತು ಇಲ್ಲಿ ಯಾವುದೇ ಉಪಕಾರಕ್ಕೂ ಬರುತ್ತಿಲ್ಲ. ಕೇರಳದ ಆಡಳಿತ ಭಾಷೆ ಯಾ ಮಾತೃಭಾಷೆ ಮಲಯಾಳ ಅರಿತಿರುವವರಿಗೆ ಮಾತ್ರ ಅರ್ಜಿ ಸಲ್ಲಿಸಲು ಅವಕಾಶ ಲಭಿಸುತ್ತಿದೆ. ಇದರಿಂದ ಕೇಂದ್ರ ಸರ್ಕಾರದ ಅಂಚೆ ಇಲಾಖೆಯ ವಿವಿಧ ಹುದ್ದೆಗಳಿಂದ ಕಾಸರಗೋಡಿನ ಕನ್ನಡಿಗರು ವಂಚಿತರಾಗಬೇಕಾದ ಸಂದಿಗ್ಧ ಪರಿಸ್ಥಿತಿ ಎದುರಾಗುತ್ತಿದೆ.
ಈ ಸಮಸ್ಯೆಯಿಂದ ಕಾಸರಗೋಡಿನ ಕನ್ನಡಿಗರನ್ನು ಪಾರುಮಾಡುವ ನಿಟ್ಟಿನಲ್ಲಿ ವಿಷ್ಣುಪ್ರಕಾಶ್ ಅವರು ಜಿಲ್ಲೆಯ ಭಾಷಾ ಅಲ್ಪಸಂಖ್ಯಾತರಿಗೂ ಅರ್ಜಿ ಸಲ್ಲಿಕೆಗೆ ಅವಕಾಶ ಮಾಡಿಕೊಡಬೇಕು. ಈ ಬಗ್ಗೆ ಆನ್‍ಲೈನ್ ಅರ್ಜಿ ಸಲ್ಲಿಕೆ ಸಂದರ್ಭ ಎದುರಾಗುವ ತಾಂತ್ರಿಕ ಸಮಸ್ಯೆಯನ್ನೂ ಪರಿಹರಿಸಬೇಕು ಎಂದು ಮನವಿಯಲ್ಲಿ ಆಗ್ರಹಿಸಿದ್ದರು. ದೇಶದೆಲ್ಲೆಡೆ ಅಂಚೆ ಕಚೇರಿಗಳಲ್ಲಿ ಕೆಲಸ ನಿರ್ವಹಿಸಲು ಎಲ್ಲ ನಾಗರಿಕರಿಗೂ ಅವಕಾಶವಿದ್ದರೂ, ಕಾಸರಗೋಡಿನ ಭಾಷಾ ಅಲ್ಪಸಂಖ್ಯಾತರು ಇದರಿಂದ ವಂಚಿತರಾಗಬೇಕಾಗಿರುವುದರಿಂದ ವಿಷ್ಣುಪ್ರಕಾಶ್ ಅಧಿಕಾರಿಗಳ ಗಮನ ಸೆಳೆದಿದ್ದರು. ಸಂಬಂಧಪಟ್ಟ ಅಧಿಕಾರಿಗಳಿಗೆ ಈ ಬಗ್ಗೆ ಪತ್ರ ರವಾನಿಸಿದ್ದು, ಭಾಷಾ ಅಲ್ಪಸಂಖ್ಯಾತರ ಸಹಾಯಕ ಆಯುಕ್ತ ಎಸ್. ಶಿವಕುಮಾರ್ ಸಹಿಹಾಕಿದ ಪತ್ರವನ್ನು ವಿಷ್ಣುಪ್ರಕಾಶ್ ಅವರಿಗೆ ಕಳುಹಿಸಿಕೊಟ್ಟಿದ್ದಾರೆ.
ಗ್ರಾಮೀಣ ಡಾಕ್ ಸೇವಕ್ ಹುದ್ದೆ-ಭಾಷಾ ಅಲ್ಪಸಂಖ್ಯಾತರ ಪರಿಗಣನೆ ಬಗ್ಗೆ ಸಹಾಯಕ ಆಯುಕ್ತರ ಪತ್ರ
0
ಫೆಬ್ರವರಿ 16, 2023
Tags