ಉಪ್ಪಳ: ನಿತ್ಯಾನಂದ ಯೋಗಾಶ್ರಮ ಕೊಂಡೆವೂರು ಮಠದಲ್ಲಿ ಶ್ರೀ ಗಾಯತ್ರೀ ದೇವಿ ಮತ್ತು ಭಗವಾನ್ ನಿತ್ಯಾನಂದ ಗುರುದೇವರ ಪ್ರತಿಷ್ಠಾ ವರ್ಧಂತ್ಯುತ್ಸವದ ಅಂಗವಾಗಿ ಬುಧವಾರ ಎಡನೀರು ಮಠದ ಶ್ರೀ ಸಚ್ಚಿದಾನಂದ ಭಾರತೀ ಶ್ರೀಪಾದಂಗಳವರು ಧಾರ್ಮಿಕ ಸಭೆಯ ದೀಪ ಪ್ರಜ್ವಲನಗೈದರು. ಪೂಜ್ಯರು ತಮ್ಮ ಅನುಗ್ರಹ ಸಂದೇಶದಲ್ಲಿ ಮಾತನಾಡಿ, ಕೊಂಡೆವೂರು ಶ್ರೀಗಳು ಯುವಜನತೆಯನ್ನು ಧಾರ್ಮಿಕ ಹಾಗೂ ಸಾಮಾಜಿಕ ಕಾರ್ಯದಲ್ಲಿ ತೊಡಗಿಸಿಕೊಳ್ಳುವುದರ ಮೂಲಕ ಧರ್ಮಜಾಗೃತಿ ಕಾರ್ಯ ಮಾಡುತ್ತಿದ್ದಾರೆ ಎಂದು ಅಭಿಪ್ರಾಯಪಟ್ಟರು.
ಕೊಂಡೆವೂರು ಶ್ರೀಗಳು ತಮ್ಮ ಆಶೀರ್ವಚನದಲ್ಲಿ, ನಾವೆಲ್ಲ ಒಂದಾಗಿ ಸನಾತನ ಸಂಸ್ಕøತಿಯ ರಕ್ಷಣೆ ಮಾಡೋಣ ಎಂದು ಕರೆ ನೀಡಿದರು. ದಿವ್ಯ ಉಪಸ್ಥಿತರಿದ್ದ ಕಟೀಲಿನ ಬ್ರಹ್ಮಶ್ರೀ ಅನಂತ ಪದ್ಮನಾಭ ಆಸ್ರಣ್ಣ ರವರು, ಕೊಂಡೆವೂರು ಮಠದ ಕಾರ್ಯ ಚಟುವಟಿಕೆಗಳನ್ನು ಹೊಗಳಿದರಲ್ಲದೆ ಜನತೆ ಇಂತಹ ಸತ್ಕಾರ್ಯಗಳಲ್ಲಿ ಇನ್ನಷ್ಟು ತೊಡಗಿಸಿಕೊಳ್ಳಬೇಕು ಎಂದು ಸಂದೇಶ ನೀಡಿದರು.
ಈ ಸಂದರ್ಭದಲ್ಲಿ ಇತ್ತೀಚೆಗೆ ಬಿಡುಗಡೆಗೊಂಡ ಕನ್ನಡ ಗಡಿ ಅಭಿವೃದ್ಧಿ ಪ್ರಾಧಿಕಾರದ ಆಧ್ಯಕ್ಷ ಡಾ. ಸಿ. ಸೋಮಶೇಖರ್ ರವರ ಆತ್ಮಕಥನ “ ನೀನೊಲಿದ ಬದುಕು”ಪುಸ್ತಕವನ್ನು ಅವರು ಪೂಜ್ಯ ಯತಿದ್ವಯರಿಗೆ ಸಮರ್ಪಿಸಿದರು. ನಂತರ ಸೋಮಶೇಖರ್ ರವರು ನಾವೆಲ್ಲ ಶ್ರಧ್ಧೆ ಪ್ರೀತಿಯಿಂದ ಕೊಂಡೆವೂರು ಮಠದ ಸಮಾಜಮುಖೀ ಚಟುವಟಿಕೆಗಳಲ್ಲಿ ಭಾಗಿಗಳಾಗೋಣ ಎಂದರು. ಅವರ ಧರ್ಮಪತ್ನಿ ಶ್ರೀಮತಿ ಸರ್ವಮಂಗಳರವರು ಉಪಸ್ಥಿತರಿದ್ದರು. ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದ ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ರವಿಶಂಕರ ಮಿಜಾರು, ಕಾಸರಗೋಡು ಯುನೈಟೆಡ್ ಮೆಡಿಕಲ್ ಸೆಂಟರ್ ನ ಢಾÀ. ಮಂಜುನಾಥ್ ಶುಭಹಾರೈಸಿದರು.
ಜಗದ್ಗುರು ಶ್ರೀ ನಿತ್ಯಾನಮದ ಮಹಾಪೀಠಮ್ ಚಾರಿಟೇಬಲ್ ಟ್ರಸ್ಟ್ ನ ವಿಶ್ವಸ್ಥ ಶ್ರೀ ಶಶಿಧರ ಶೆಟ್ಟಿ ಗ್ರಾಮಚಾವಡಿ ಉಪಸ್ಥಿತರಿದ್ದರು. ಕರ್ನಾಟಕ ವಿಧಾನ ಪರಿಷತ್ತಿನ ಮಾಜಿ ಸದಸ್ಯ ಮಂಗಳೂರಿನ ಮೋನಪ್ಪ ಭಂಡಾರಿ ಅವರು ಅಧ್ಯಕ್ಷತೆ ವಹಿಸಿದ್ದ ಕಾರ್ಯಕ್ರಮದಲ್ಲಿ ಕು. ಗಾಯತ್ರಿ, ಕು.ಶ್ರಾವಣ್ಯ ಕೊಂಡೆವೂರು ಪ್ರಾರ್ಥನಾ ಗೀತೆ ಹಾಡಿದರು. ಅಶೋಕ್ ಬಾಡೂರು ಸ್ವಾಗತಿಸಿ, ಭಾಸ್ಕರ್ ಕೊಂಡೆವೂರು ವಂದಿಸಿದರು. ನ್ಯಾಯವಾದಿ. ಗಂಗಾಧರ ಕೊಂಡೆವೂರು ನಿರೂಪಣೆಗೈದರು.
ಅನ್ನಪ್ರಸಾದದ ಬಳಿಕ ಸದ್ಗುರು ಶ್ರೀ ನಿತ್ಯಾನಂದ ವಿದ್ಯಾಪೀಠದ ವಿದ್ಯಾರ್ಥಿಗಳಿಂದ ಯಕ್ಷನೃತ್ಯ ಹಾಗೂ ನರಕಾಸುರ ಮೋಕ್ಷ ಯಕ್ಷಗಾನಪ್ರದರ್ಶನ ನಡೆಯಿತು. ಬಳಿಕ ಸವಿಜೀವನಂ ನೃತ್ಯಕಲಾ ಟ್ರಸ್ಟ್ ಕೊಡಿಯಾಲಬೈಲು ಮಂಗಳೂರು ಇವರಿಂದ ಭರತನಾಟ್ಯ ಕಾರ್ಯಕ್ರಮವೂ ನಡೆಯಿತು.
ಯುವ ಜನತೆ ಧಾರ್ಮಿಕತೆಯಲ್ಲಿ ಭಾಗಿಯಾಗಬೇಕು: ಕೊಂಡೆವೂರು ಮಠದಲ್ಲಿ ಎಡನೀರು ಶ್ರೀಗಳು
0
ಫೆಬ್ರವರಿ 24, 2023
Tags