ನವದೆಹಲಿ : ದಿಲ್ಲಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರನ್ನು ಮದ್ಯ ನೀತಿ ಹಗರಣಕ್ಕೆ ಸಂಬಂಧಿಸಿದಂತೆ ಬಂಧಿಸಿರುವ ಸಿಬಿಐ ಕ್ರಮದ ವಿರುದ್ಧ ತನ್ನ ವಾಗ್ದಾಳಿ ಮುಂದುವರಿಸಿರುವ ಆಮ್ ಆದ್ಮಿ ಪಕ್ಷ, ಮಂಗಳವಾರ ಕೇಸರಿ ಪಕ್ಷದ ʻವಾಷಿಂಗ್ ಮಶೀನ್ ಸೇವೆಯʼ ಸಂತೃಪ್ತ ಗ್ರಾಹಕರ ಪಟ್ಟಿಯನ್ನು ಶೇರ್ ಮಾಡಿದೆ.
"ಬಿಜೆಪಿಯ ವಾಷಿಂಗ್ ಮಶೀನ್ ಸೇವೆಯ ಕೆಲವೊಂದು ಸಂತೃಪ್ತ ಗ್ರಾಹಕರು," ಎಂದು ಆಪ್ ತನ್ನ ಅಧಿಕೃತ ಟ್ವಿಟ್ಟರ್ ಹ್ಯಾಂಡಲ್‌ನಲ್ಲಿ ಬರೆದುಕೊಂಡಿದೆ.
ಈ ʻಸಂತೃಪ್ತ ಗ್ರಾಹಕರʼ ಪಟ್ಟಿಯಲ್ಲಿ ಕೇಂದ್ರ ಸಚಿವ ನಾರಾಯಣ ರಾಣೆ, ಅಸ್ಸಾಂ ಸೀಎಂ ಹಿಮಂತ ಬಿಸ್ವ ಸರ್ಮ, ಬಂಗಾಳದ ವಿರೋಧ ಪಕ್ಷ ನಾಯಕ ಸುವೇಂದು ಅಧಿಕಾರಿ, ಕರ್ನಾಟಕದ ಮಾಜಿ ಸೀಎಂ ಬಿ ಎಸ್ ಯಡಿಯೂರಪ್ಪ ಮತ್ತಿತರರು ಇದ್ದಾರೆ.
ಭ್ರಷ್ಟಾಚಾರ ಆರೋಪ ಎದುರಿಸುವ ವಿಪಕ್ಷದ ರಾಜಕಾರಣಿಯೊಬ್ಬರು ಬಿಜೆಪಿ ಸೇರಿದಾಕ್ಷಣ ಅವರಿಗೆ ತನಿಖಾ ಏಜನ್ಸಿಗಳು ಕ್ಲೀನ್ ಚಿಟ್ ನೀಡುವ ವಿದ್ಯಮಾನಗಳ ಹಿನ್ನೆಲೆಯಲ್ಲಿ ವಿರೋಧ ಪಕ್ಷಗಳು ಆಗಾಗ ಬಿಜೆಪಿಯನ್ನು ಉಲ್ಲೇಖಿಸಿ ʻವಾಷಿಂಗ್ ಮಶೀನ್ʼ ಪದ ಬಳಸುತ್ತವೆ.
ಸಿಸೋಡಿಯಾ ವಿರುದ್ಧದ ಆರೋಪವನ್ನು ಆಪ್ ನಿರಾಕರಿಸುತ್ತಲೇ ಬಂದಿದೆ. ರವಿವಾರ ಸಿಸೋಡಿಯಾ ಅವರ ಬಂಧನವಾಗಿದ್ದರೆ ಸೋಮವಾರ ನಗರದ ರೋಸ್ ಅವೆನ್ಯೂ ನ್ಯಾಯಾಲಯ ಅವರನ್ನು ಮಾರ್ಚ್ 4 ರ ತನಕ ಐದು ದಿನಗಳ ಸಿಬಿಐ ಕಸ್ಟಡಿಗೆ ವಹಿಸಿದೆ.