ನವದೆಹಲಿ: ಒಂಭತ್ತರಿಂದ 14 ವರ್ಷ ವಯೋಮಾನದ ಬಾಲಕಿಯರಿಗೆ ಗರ್ಭಕಂಠ ಕ್ಯಾನ್ಸರ್ ಲಸಿಕೆ ನೀಡುವ ಅಭಿಯಾನಕ್ಕೆ ಸರ್ಕಾರ ಜೂನ್‌ನಲ್ಲಿ ಚಾಲನೆ ನೀಡುವ ಸಾಧ್ಯತೆ ಇದೆ. ಮೊದಲ ಹಂತದಲ್ಲಿ ಕರ್ನಾಟಕ ಸೇರಿ 6 ರಾಜ್ಯಗಳಲ್ಲಿ ಅಭಿಯಾನ ನಡೆಸಲಾಗುವುದು ಎಂದು ಅಧಿಕೃತ ಮೂಲಗಳು ಭಾನುವಾರ ತಿಳಿಸಿವೆ.
ಕರ್ನಾಟಕ, ತಮಿಳುನಾಡು, ಮಿಜೋರಾಂ, ಛತ್ತೀಸಗಢ, ಮಹಾರಾಷ್ಟ್ರ ಮತ್ತು ಉತ್ತರ ಪ್ರದೇಶದ ಸುಮಾರು 2.55 ಕೋಟಿ ಬಾಲಕಿಯರಿಗೆ ಹ್ಯೂಮನ್ ಪಾಪಿಲ್ಲೊಮವೈರಸ್ (ಎಚ್‌ಪಿವಿ) ವಿರೋಧಿ ಲಸಿಕೆಗಳನ್ನು ನೀಡಲಾಗುವುದು ಎನ್ನಲಾಗಿದೆ.
ಸಾರ್ವತ್ರಿಕ ರೋಗನಿರೋಧಕ ಕಾರ್ಯಕ್ರಮದಡಿ ಎಚ್‌ವಿಪಿ ಲಸಿಕೆಗಳನ್ನು ನೀಡಲು ಕೇಂದ್ರ ಆರೋಗ್ಯ ಸಚಿವಾಲಯವು ಮಾರ್ಗನಕ್ಷೆ ರೂಪಿಸಿದೆ. 2026ರ ಒಳಗೆ 16.02 ಡೋಸ್ ಲಸಿಕೆಯನ್ನು ಸಂಗ್ರಹಿಸುವ ಸಲುವಾಗಿ ಏಪ್ರಿಲ್‌ನಲ್ಲಿ ಜಾಗತಿಕ ಮಟ್ಟದಲ್ಲಿ ಟೆಂಡರ್ ಕರೆಯುವ ನಿರೀಕ್ಷೆಯೂ ಇದೆ ಎಂದು ಮೂಲಗಳು ತಿಳಿಸಿವೆ.
ದೇಶೀಯವಾಗಿ ಅಭಿವೃದ್ಧಿಪಡಿಸಿರುವ 'ಸೆರ್ವಾವ್ಯಾಕ್' ಲಸಿಕೆಯನ್ನು ಸೀರಂ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ ಕಳೆದ ತಿಂಗಳು ಬಿಡುಗಡೆ ಮಾಡಿದೆ. ಖಾಸಗಿ ಮಾರುಕಟ್ಟೆಯಲ್ಲಿ ಈ ಲಸಿಕೆಯು ಒಂದು ಡೋಸ್‌ಗೆ ₹2,000ದಂತೆ ಲಭ್ಯವಿರಲಿದೆ ಎಂದು ಸಂಸ್ಥೆ ಹೇಳಿದೆ.
ಸದ್ಯ, ಅಮೆರಿಕ ಮೂಲದ 'ಮೆರ್ಕ್ಸ್ ಗರ್ಡಸಿಲ್' ಸಂಸ್ಥೆಯ ಎಚ್‌ಪಿವಿ ಲಸಿಕೆ ಮಾತ್ರ ಖಾಸಗಿ ಮಾರುಕಟ್ಟೆಯಲ್ಲಿ ಲಭ್ಯವಿದೆ. ಒಂದು ಡೋಸ್ ಲಸಿಕೆ ಬೆಲೆ ₹10,850 ಇದೆ.