ನವದೆಹಲಿ: 'ಟರ್ಕಿಯಲ್ಲಿ ಭೂಕಂಪ ಸಂಭವಿಸಿದ ವೇಳೆ ಸಂತ್ರಸ್ತರಿಗಾಗಿ ಭಾರತೀಯ ಸೇನೆಯು ತಾತ್ಕಾಲಿಕ ಆಸ್ಪತ್ರೆಯನ್ನು ನಿರ್ಮಿಸಿತ್ತು. ಈ ಕ್ಷಿಪ್ರ ಕಾರ್ಯಾಚರಣೆಯು ಸೇನೆಯ ಸನ್ನದ್ಧತೆಯನ್ನು ತೋರಿಸುತ್ತದೆ' ಎಂದು ಸೇನೆಯ ಮುಖ್ಯಸ್ಥ ಜನರಲ್ ಮನೋಜ್ ಪಾಂಡೆ ಮಂಗಳವಾರ ಹೇಳಿದರು.
'ಪ್ರಾಕೃತಿಕ ವಿಪತ್ತಿನಿಂದಾಗಿ ಸಂಕಷ್ಟದಲ್ಲಿದ್ದ ಟರ್ಕಿ ಜನರಿಗೆ ಮಾನವೀಯ ನೆರವು ನೀಡಿ, ಪರಿಹಾರ ಕಾರ್ಯಗಳನ್ನು ಕೈಗೆತ್ತಿಕೊಂಡ ತನ್ನ ವೈದ್ಯಕೀಯ ತಂಡದ ಬಗ್ಗೆ ಸೇನೆಗೆ ಹೆಮ್ಮೆ ಇದೆ' ಎಂದೂ ಅವರು ಹೇಳಿದರು.
ಟರ್ಕಿಯ ಇಸ್ಕೆಂದೆರುನ್ ಎಂಬಲ್ಲಿ ಸಂತ್ರಸ್ತರಿಗೆ ನೆರವು ನೀಡಿದ ನಂತರ, ತವರಿಗೆ ಮರಳಿದ ವೈದ್ಯಕೀಯ ತಂಡದೊಂದಿಗೆ ಸಂವಾದ ನಡೆಸಿದ ಬಳಿಕ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.
ಟರ್ಕಿಯ ಭೂಕಂಪ ಸಂತ್ರಸ್ತರ ನೆರವಿಗಾಗಿ ಭಾರತವು ಫೆ. 7ರಿಂದ 19ರ ವರೆಗೆ 'ಆಪರೇಷನ್ ದೋಸ್ತ್' ಎಂಬ ಕಾರ್ಯಾಚರಣೆ ಕೈಗೊಂಡಿತ್ತು. ಸಂತ್ರಸ್ತರ ನೆರವಿಗಾಗಿ ಇಸ್ಕೆಂದೆರುನ್‌ನಲ್ಲಿ 30 ಹಾಸಿಗೆಗಳ ತಾತ್ಕಾಲಿಕ ಆಸ್ಪತ್ರೆಯನ್ನು ನಿರ್ಮಿಸಲಾಗಿತ್ತು ಎಂದೂ ಅವರು ಹೇಳಿದರು.