ನವದೆಹಲಿ: ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಆಪ್ತ ಅಲಂಕಾರ್ ಸವಾಯಿ ಅವರನ್ನು ಜಾರಿ ನಿರ್ದೇಶನಾಲಯದ (ಇ.ಡಿ) ಅಧಿಕಾರಿಗಳು ಮೂರು ದಿನಗಳ ಕಾಲ ವಿಚಾರಣೆ ನಡೆಸಿದ್ದಾರೆ ಎಂದು ವರದಿಯಾಗಿದೆ.
ಕ್ರೌಡ್ ಫಂಡಿಂಗ್ ಹಗರಣದಲ್ಲಿ ತೃಣಮೂಲ ಕಾಂಗ್ರೆಸ್ ಪಕ್ಷದ (ಟಿಎಂಸಿ) ವಕ್ತಾರ ಸಾಕೇತ್ ಗೋಖಲೆ ಅವರನ್ನು ಇತ್ತೀಚೆಗೆ ಗುಜರಾತ್‌ನಲ್ಲಿ ಬಂಧಿಸಲಾಗಿತ್ತು.
ಈ ಪ್ರಕರಣದಲ್ಲಿ ಅಕ್ರಮ ಹಣ ವರ್ಗಾವಣೆಗೆ ಸಂಬಂಧಿಸಿದಂತೆ ಅಲಂಕಾರ್ ಸವಾಯಿ ಅವರ ಹೇಳಿಕೆಯನ್ನು ಇ.ಡಿ ದಾಖಲಿಸಿಕೊಂಡಿದೆ.
ಈ ಸಂಬಂಧ ಅಲಂಕಾರ್ ಸವಾಯಿಗೆ ಸಮನ್ಸ್ ನೀಡಲಾಗಿತ್ತು.
35 ವರ್ಷದ ಗೋಖಲೆ ಅವರ ಖಾತೆಗೆ ಒಂದು ವರ್ಷದಲ್ಲಿ ₹23.54 ಲಕ್ಷ ನಗದು ರೂಪದಲ್ಲಿ ಜಮೆ ಮಾಡಲಾಗಿದೆ. ಈ ಕುರಿತು ವಿಚಾರಣೆ ನಡೆಸಿದಾಗ ಕಾಂಗ್ರೆಸ್‌ನ ಸಾಮಾಜಿಕ ಜಾಲತಾಣದ ನಿರ್ವಹಣೆ ಮತ್ತು ಇತರೆ ಸಲಹೆಗಾಗಿ ಅಲಂಕಾರ್ ಸವಾಯಿ ಅವರು ನೀಡಿದ್ದರು ಎಂದು ಗೋಖಲೆ ಹೇಳಿಕೆ ನೀಡಿದ್ದರು.
ನಗದು ರೂಪದಲ್ಲೇ ಹಣ ನೀಡಿರುವುದೇಕೆ ಎಂದು ಕೇಳಿದಾಗ ಅದಕ್ಕೆ ಸವಾಯಿ ಅವರೇ ಉತ್ತರಿಸಬೇಕು ಎಂದು ಗೋಖಲೆ ಹೇಳಿರುವುದಾಗಿ ರಿಮಾಂಡ್ ವರದಿಯಲ್ಲಿ ಇ.ಡಿ ನ್ಯಾಯಾಲಯಕ್ಕೆ ತಿಳಿಸಿದೆ.
ಸಾಮಾಜಿಕ ಜಾಲತಾಣದ ಕೆಲಸಗಳಿಗೆ ಸವಾಯಿ ಅವರೊಂದಿಗೆ ಲಿಖಿತ ಕರಾರಿನ ಬಗ್ಗೆ ವಿಚಾರಿಸಿದಾಗ ಅದು ಕೇವಲ ಮೌಖಿಕ ವಹಿವಾಟು ಆಗಿದೆ ಎಂದು ಗೋಖಲೆ ಉತ್ತರಿಸಿರುವುದಾಗಿ ಇ.ಡಿ. ಹೇಳಿದೆ.
ಗೋಖಲೆ ತೃಣಮೂಲ ಕಾಂಗ್ರೆಸ್ ಸದಸ್ಯರಾಗಿದ್ದಾಗ ಸಮಯದಲ್ಲಿ ಈ ನಗದನ್ನು ಪಡೆದಿದ್ದರು ಎಂದು ಇ.ಡಿ ಉಲ್ಲೇಖ ಮಾಡಿದೆ.