ನವದೆಹಲಿ: 'ಗರ್ಭಕಂಠ ಕ್ಯಾನ್ಸರ್‌ಗೆ ಸೀರಂ ಇನ್‌ಸ್ಟಿಟ್ಯೂಟ್ ತಯಾರಿಸಿರುವ 'ಸರ್ವಾವ್ಯಾಕ್' ಲಸಿಕೆಯು ಇದೇ ತಿಂಗಳಿನಿಂದ ಮಾರುಕಟ್ಟೆಯಲ್ಲಿ ದೊರೆಯಲಿದೆ. ಎರಡು ಡೋಸ್‌ಗಳಿರುವ ಒಂದು ಬಾಟಲಿಗೆ ₹2 ಸಾವಿರ ನಿಗದಿ ಮಾಡಲಾಗಿದೆ' ಎಂದು ಮೂಲಗಳು ಗುರುವಾರ ತಿಳಿಸಿವೆ.
'ಮಾರುಕಟ್ಟೆಗೆ ಲಸಿಕೆಯನ್ನು ಬಿಡುಗಡೆ ಮಾಡಲಾಗುವುದು. ದೇಶದಲ್ಲಿ ಸಿಗುತ್ತಿರುವ ಕ್ಯಾನ್ಸರ್‌ನ ಬೇರೆ ಎಲ್ಲಾ ಲಸಿಕೆಗಳಿಗಿಂತ ಸರ್ವಾವ್ಯಾಕ್ ಕಡಿಮೆ ದರದ್ದಾಗಿದೆ' ಎಂದು ಸೀರಂನ ಸರ್ಕಾರಿ ಹಾಗೂ ನಿಯಂತ್ರಕ ವ್ಯವಹಾರಗಳ ನಿರ್ದೇಶಕ ಪ್ರಕಾಶ್ ಕುಮಾರ್ ಸಿಂಗ್ ಕೇಂದ್ರ ಆರೋಗ್ಯ ಸಚಿವಾಲಯಕ್ಕೆ ಪತ್ರ ಬರೆದಿದ್ದಾರೆ ಎಂದು ಮೂಲಗಳು ತಿಳಿಸಿವೆ.
'ಕೇಂದ್ರವು ಯಾವಾಗ ಲಸಿಕೆಯನ್ನು ಖರೀದಿಸಲು ಬಯಸುತ್ತದೆಯೋ, ಆಗ ಲಸಿಕೆಯನ್ನು ಇನ್ನಷ್ಟು ಕಡಿಮೆ ದರದಲ್ಲಿ ನೀಡಲಾಗುವುದು' ಎಂದೂ ಪತ್ರದಲ್ಲಿ ತಿಳಿಸಿದ್ದಾರೆ ಎನ್ನಲಾಗಿದೆ.
ಸರ್ವಾವ್ಯಾಕ್ ಲಸಿಕೆಯನ್ನು ಜ.24ರಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಲೋಕಾರ್ಪಣೆ ಮಾಡಿದ್ದರು. ದೇಶವು ಕ್ಯಾನ್ಸರ್ ಲಸಿಕೆಗಾಗಿ ವಿದೇಶಿ ಕಂಪೆನಿಗಳನ್ನೇ ಅವಲಂಬಿಸಿದೆ. ಸದ್ಯ ಮಾರುಕಟ್ಟೆಯಲ್ಲಿ ಲಭ್ಯವಿರುವ ಅಮೆರಿಕದ ಗಾರ್ಡಿಸಿಲ್ ಲಸಿಕೆಯ ಒಂದು ಡೋಸ್‌ಗೆ ₹10,850 ದರವಿದೆ.