ತಿರುವನಂತಪುರ: ಮುಖ್ಯಮಂತ್ರಿ ಪರಿಹಾರ ನಿಧಿಯಿಂದ ಹಣ ಲೂಟಿ ಪ್ರಕರಣ ರಾಜ್ಯ ಕಂಡು ಕೇಳರಿಯದ ಹಗರಣವಾಗಿದ್ದು, ಈ ಬಗ್ಗೆ ಹೈಕೋರ್ಟ್ ಮೇಲ್ವಿಚಾರಣೆಯಲ್ಲಿ ಸಮಗ್ರ ತನಿಖೆ ನಡೆಸುವಂತೆ ಬಿಜೆಪಿ ರಾಜ್ಯಾಧ್ಯಕ್ಷ ಕೆ. ಸುರೇಂದ್ರನ್ ಒತ್ತಾಯಿಸಿದ್ದಾರೆ.
ಹಗರಣದಲ್ಲಿ ಮುಖ್ಯಮಂತ್ರಿ ಕಚೇರಿಯ ಪಾತ್ರದ ಬಗ್ಗೆ ತನಿಖೆಯಾಗಬೇಕು. ಬಡಜನರ ಅನ್ನದ ಬಟ್ಟಲಿನಿಂದ ಹಣ ದೋಚಿದ ಸರ್ಕಾರ ಜನಸಾಮಾನ್ಯರಿಗೆ ನೀಡಿದ ಭರವಸೆಗಳನ್ನು ಗಾಳಿಗೆ ತೂರಿದೆ. ವಿರೋಧ ಪಕ್ಷದ ನಾಯಕ ವಿ.ಡಿ. ಸತೀಶನ್ ಮತ್ತು ಇತರರ ಅನುಮತಿಯೊಂದಿಗೇ ಈ ವಂಚನೆ ನಡೆದಿದ್ದು, ಇದನ್ನೂ ತನಿಖೆಯ ವ್ಯಾಪ್ತಿಗೆ ಒಳಪಡಿಸಬೇಕು. ವಿಜಿಲೆನ್ಸ್ ತನಿಖೆಯು ಸಾಕ್ಷ್ಯವನ್ನು ಹುಡುಕಲು ಹೋಗುವುದಿಲ್ಲ. ಲೈಫ್ ಮಿಷನ್ ಹಗರಣದ ಹಿಂದೆ ಮುಖ್ಯಮಂತ್ರಿ ಕಚೇರಿ ಹಾಗೂ ಕಂದಾಯ ಸಚಿವರ ಕೈವಾಡವಿರುವುದು ಬಯಲಾಗಿದೆ. ಈ ಬಗ್ಗೆಯೂ ತನಿಖೆಯಾಗಬೇಕು. ಮುಖ್ಯಮಂತ್ರಿ ಹಾಗೂ ಕಂದಾಯ ಸಚಿವರ ಪಾತ್ರದ ಬಗ್ಗೆಯೂ ತನಿಖೆಯಾಗಬೇಕು. ಉದ್ಯೋಗ ಖಾತ್ರಿ ಕೆಲಸದ ಕಾರ್ಮಿಕರನ್ನು ಹಾದಿ ತಪ್ಪಿಸಲಾಗುತ್ತಿದೆ. ಇವರಿಗೆ ಸುಳ್ಳು ಮಾಹಿತಿ ನೀಡಿ, ಇವರನ್ನು ಸಿಪಿಎಂನ ಸಮ್ಮೇಳನ, ಮೆರವಣಿಗೆಗೆ ಕರೆದೊಯ್ಯಲಗುತ್ತಿದೆ. ಈ ರೀತಿ ಮೆರವಣಿಗೆ,ಸಮ್ಮೇಳನಗಳಿಗೆ ತೆರಳದವರಿಗೆ ಕೆಲಸ ಕೊಡುವುದಿಲ್ಲ. ಉದ್ಯೋಗ ಖಾತ್ರಿ ಹೆಸರಲ್ಲೂ ರಾಜ್ಯ ಸರ್ಕಾರ ಭಾರಿ ಹಗರಣ ನಡೆಸಿದ್ದು, ಕೇಂದ್ರ ಸರ್ಕಾರದ ಗಮನಕ್ಕೆ ತರಲಾಗುವುದು ಎಂದು ಸುರೇಂದ್ರನ್ ತಿಳಿಸಿದರು.
ಮುಖ್ಯಮಂತ್ರಿ ಪರಿಹಾರ ನಿಧಿ ಹೆಸರಲ್ಲಿ ವಂಚನೆ: ಹೈಕೋರ್ಟ್ ಉಸ್ತುವಾರಿಯಲ್ಲಿ ನ್ಯಾಯಾಂಗ ವಿಚಾರಣೆಗೆ ಬಿಜೆಪಿ ಆಗ್ರಹ
0
ಫೆಬ್ರವರಿ 27, 2023