ನವದೆಹಲಿ: ಬಿಬಿಸಿಯ ದೆಹಲಿ ಮತ್ತು ಮುಂಬೈ ಕಚೇರಿಗಳಲ್ಲಿ ಆದಾಯ ತೆರಿಗೆ ಇಲಾಖೆಯ (ಐ.ಟಿ) ಪರಿಶೀಲನೆ ಕುರಿತು ವಿರೋಧ ಪಕ್ಷಗಳ ಟೀಕೆಗಳಿಗೆ ಕೇಂದ್ರ ಸಚಿವ ಕಿರಣ್ ರಿಜಿಜು ತಿರುಗೇಟು ನೀಡಿದ್ದಾರೆ.
ಕೆಲವರಿಗೆ ಭಾರತೀಯ ತನಿಖಾ ಸಂಸ್ಥೆಗಳ ಮೇಲೆ ನಂಬಿಕೆಯಿಲ್ಲ.
ವಿದೇಶಿ ಸುದ್ದಿವಾಹಿನಿಗಳನ್ನು ನಂಬುತ್ತಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.
ಇಂತವರು ವಿದೇಶಿ ಪ್ರಸಾರ ಮಾಧ್ಯಮಗಳ ಮೇಲೆ ನಂಬಿಕೆಯಿರಿಸುತ್ತಾರೆ. ಆದರೆ ಭಾರತದ ತನಿಖಾ ಸಂಸ್ಥೆಗಳನ್ನು ನಂಬುವುದಿಲ್ಲ. ಅವರು ಬಿಬಿಸಿ ಮೂಲಕ ಪ್ರಮಾಣ ಮಾಡುತ್ತಾರೆ. ಆದರೆ ಭಾರತದ ನ್ಯಾಯಾಲದ ಮೇಲೆ ನಂಬಿಕೆ ಇರಿಸುವುದಿಲ್ಲ. ವ್ಯತಿರಿಕ್ತ ತೀರ್ಪು ಬಂದರೆ ಸುಪ್ರೀಂ ಕೋರ್ಟ್ ಅನ್ನು ನಿಂದಿಸಲು ಹಿಂಜರಿಯುವುದಿಲ್ಲ ಎಂದು ಹೇಳಿದ್ದಾರೆ.
ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿ ಕುರಿತು ಸಾಕ್ಷ್ಯಚಿತ್ರ 'ಇಂಡಿಯಾ ದಿ ಕ್ವೆಶನ್' ಅನ್ನು ಬಿಬಿಸಿ ಬಿಡುಗಡೆಗೊಳಿಸಿತ್ತು. 2022ರಲ್ಲಿ ಮೋದಿ ಗುಜರಾತ್ ಮುಖ್ಯಮಂತ್ರಿಯಾಗಿದ್ದ ಕಾಲದಲ್ಲಿ ನಡೆದಿದ್ದ ಹಿಂಸಾಚಾರಕ್ಕೆ ಸಂಬಂಧಿಸಿದ ಸಾಕ್ಷ್ಯಚಿತ್ರ ಇದಾಗಿದೆ.
ಸಾಕ್ಷ್ಯಚಿತ್ರ ಪ್ರದರ್ಶನಕ್ಕೆ ಕೇಂದ್ರ ಸರ್ಕಾರ ನಿರ್ಬಂಧ ವಿಧಿಸಿತ್ತು. ಇದಾದ ಕೆಲವೇ ದಿನಗಳಲ್ಲಿ ಬಿಬಿಸಿ ಕಚೇರಿಗಳ ಮೇಲೆ ಐಟಿ ಕಾರ್ಯಾಚರಣೆ ನಡೆದಿದೆ.