ಬದಿಯಡ್ಕ: ಬದಿಯಡ್ಕ ಪೊಲೀಸ್ ಠಾಣೆ ಆಸುಪಾಸು ರಸ್ತೆಬದಿ ತುಂಬಿಕೊಂಡಿರುವ ಹಳೇ ವಾಹನಗಳನ್ನು ತೆರವುಗೊಳಿಸಿ ರಸ್ತೆಕಾಮಗಾರಿ ಮುಂದುವರಿಸಲಾಗಿದೆ. ಕೆಎಸ್‍ಟಿಪಿ ಯೋಜನೆಯನ್ವಯ 158ಕೋಟಿ ರೂ. ವೆಚ್ಚದಲ್ಲಿ ಕುಂಬಳೆ-ಮುಳ್ಳೇರಿಯ ರಸ್ತೆ ಅಭಿವೃದ್ಧಿ ಕಾಮಗಾರಿ ನಡೆದುಬರುತ್ತಿದ್ದು, ರಸ್ತೆಬದಿ ನಿಲುಗಡೆಗೊಳಿಸಿದ್ದ ವಾಹನಗಳಿಂದ ಕಾಮಗಾರಿಗೆ ಅಡಚಣೆಯುಂಟಾಗುತ್ತಿರುವ ಬಗ್ಗೆ ಗುತ್ತಿಗೆದಾರರು ದೂರಿದ್ದರು. ಪೊಲೀಸರು ವಶಪಡಿಸಿಕೊಂಡಿದ್ದ ಹಲವು ವಾಹನಗಳನ್ನು ಪೊಲೀಸ್‍ಠಾಣೆ ವಠಾರದಲ್ಲಿ ಜಾಗದ ಕೊರತೆ ಹಿನ್ನೆಲೆಯಲ್ಲಿ ರಸ್ತೆ ಅಂಚಿಗೆ ನಿಲುಗಡೆಗೊಳಿಸಲಾಗಿತ್ತು.
ಈ ಮಧ್ಯೆ ರಸ್ತೆಕಾಮಗಾರಿ ನಡೆಸುವ ಸಂದರ್ಭ ವಾಹನಗಳಿಂದ ಕೆಲಸಕಾರ್ಯಗಳಿಗೂ ತೊಡಕಾಗಿ ಪರಿಣಮಿಸಿತ್ತು. ಹಳೇ ವಾಹನಗಳನ್ನು ತೆರವುಗೊಳಿಸಲು ಪೊಲೀಸರು ಅನುಮತಿ ನೀಡಿದ್ದರೂ, ಜಾಗದ ಸಮಸ್ಯೆ ಎದುರಾಗಿದ್ದ ಹಿನ್ನೆಲೆಯಲ್ಲಿ ವಾಹನ ತೆರವುಪ್ರಕ್ರಿಯೆ ವಿಳಂಬಗೊಂಡಿತ್ತು. ಕೊನೆಗೂ ಠಾಣೆ ಆವರಣದಲ್ಲಿ ದೊಡ್ಡ ವಾಹನದ ಮೇಲೆ ಸಣ್ಣವಾಹನ ಇರಿಸುವ ಮೂಲಕ ವಾಹನ ನಿಲುಗಡೆಗೆ ಸ್ಥಳಾವಕಾಶ ಕಂಡುಕೊಳ್ಳಲಾಗಿದೆ!
ಕುಂಬಳೆಯಿಂದ ಸೀತಾಂಗೋಳಿ, ಬದಿಯಡ್ಕ, ನಾರಂಪಾಡಿ ಮೂಲಕ ಮುಳ್ಳೇರಿಯಾಕ್ಕೆ 29ಕಿ.ಮೀ ದೂರವಿದ್ದು, ಪ್ರಸಕ್ತ ರಸ್ತೆಯನ್ನು ಕೆಎಸ್‍ಟಿಪಿ ಯೋಜನೆಯನ್ವಯ 158ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗುತ್ತಿದೆ. ಕುಂಬಳೆಯಿಂದ ಬದಿಯಡ್ಕ ವರೆಗೆ ಬಹುತೇಕ ಕಾಂಗಾರಿ ಮುಕ್ತಾಯದ ಹಂತದಲ್ಲಿದ್ದರೆ, ಬದಿಯಡ್ಕ ಠಾಣೆ ಎದುರಿನ ರಸ್ತೆ ಅಂಚಿಗೆ ನಿಲ್ಲಿಸಿರುವ ವಾಹನಗಳಿಂದ ಕಾಮಗಾರಿ ನಡೆಸಲಾಗದ ಸ್ಥಿತಿ ಎದುರಾಗಿತ್ತು. ಕಾಮಗಾರಿ ಸಥಗಿತಗೊಮಡಿದ್ದ ಬಗ್ಗೆ 'ವಿಜಯವಾಣಿ'ವಿಶೇಷ ವರದಿ ಪ್ರಕಟಿಸಿತ್ತು.