ನವದೆಹಲಿ: ದೆಹಲಿ ಅಬಕಾರಿ ನೀತಿ ಹಗರಣ ಪ್ರಕರಣದಲ್ಲಿ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರನ್ನು ಸಿಬಿಐ ಬಂಧಿಸಿದೆ.
ಮನೀಶ್ ಸಿಸೋಡಿಯಾ ಅವರನ್ನು ಸತತ 8 ಗಂಟೆಗಳ ಕಾಲ ವಿಚಾರಣೆ ನಡೆಸಿದ ಬಳಿಕ ಸಿಬಿಐ ಆತನನ್ನು ಬಂಧಿಸಿದೆ. ಸಿಸೋಡಿಯಾ ವಿಚಾರಣೆ ಹಿನ್ನೆಲೆಯಲ್ಲಿ ಸಿಬಿಐ ಕೇಂದ್ರ ಕಚೇರಿ ಸುತ್ತಮುತ್ತ ಪೊಲೀಸರು ಸೆಕ್ಷನ್ 144 ಜಾರಿಗೊಳಿಸಿದ್ದರು.
ಜುಲೈ 31ರಂದು ಹೊಸ ಅಬಕಾರಿ ನೀತಿ ರದ್ದು
ಆಮ್ ಆದ್ಮಿ ಪಕ್ಷದ (ಎಎಪಿ) ಮಹತ್ವಾಕಾಂಕ್ಷೆಯ ದೆಹಲಿ ಅಬಕಾರಿ ನೀತಿಯನ್ನು 31 ಜುಲೈ
2022 ರಂದು ರದ್ದುಗೊಳಿಸಲಾಗಿತ್ತು. ಹೊಸ ನೀತಿಯನ್ನು ರದ್ದುಗೊಳಿಸಿದ ನಂತರ, ದೆಹಲಿ
ಸರ್ಕಾರವು ನವೆಂಬರ್ 17, 2020 ರ ಮೊದಲು ಜಾರಿಗೆ ತಂದ ಹಳೆಯ ಅಬಕಾರಿ ಆಡಳಿತವನ್ನು ಮರಳಿ
ತರಲು ನಿರ್ಧರಿಸಿತ್ತು. ಅಬಕಾರಿ ನೀತಿ ಜಾರಿಯಾದ ತಕ್ಷಣ ಇಡಿ ಮತ್ತು ಸಿಬಿಐ ಉಪ
ಮುಖ್ಯಮಂತ್ರಿ ಮನೆ ಸೇರಿದಂತೆ ದೇಶದ ವಿವಿಧೆಡೆ ಹಲವು ಬಾರಿ ಶೋಧ ನಡೆಸಿದ್ದವು.
2022ರ ಜುಲೈ 22ರಂದು, ಎಲ್‌ಜಿ ವಿಕೆ ಸಕ್ಸೇನಾ ಅವರು ಹೊಸ ಅಬಕಾರಿ ನೀತಿಯ ಅನುಷ್ಠಾನದಲ್ಲಿ ಆಪಾದಿತ ನಿಯಮ ಉಲ್ಲಂಘನೆ ಮತ್ತು ಕಾರ್ಯವಿಧಾನದ ಲೋಪಗಳ ಕುರಿತು ಸಿಬಿಐ ತನಿಖೆಗೆ ಶಿಫಾರಸು ಮಾಡಿದರು. ಮದ್ಯದ ಪರವಾನಗಿದಾರರಿಗೆ ಅನಗತ್ಯ ಪ್ರಯೋಜನಗಳನ್ನು ನೀಡಲಾಗಿದೆ ಎಂದು ದೆಹಲಿಯ ಮುಖ್ಯ ಕಾರ್ಯದರ್ಶಿಯ ವರದಿ ಹೇಳಿತ್ತು. ಆಪಾದಿತ ಅಕ್ರಮಗಳಲ್ಲಿ ಅಬಕಾರಿ ಇಲಾಖೆಯ ಅಧಿಕಾರಿಗಳ ಪಾತ್ರದ ಬಗ್ಗೆ ತನಿಖೆ ನಡೆಸುವಂತೆ ಎಲ್‌ಜಿ ದೆಹಲಿಯ ಮುಖ್ಯ ಕಾರ್ಯದರ್ಶಿಗೆ ಸೂಚಿಸಿದರು. ಚಿಲ್ಲರೆ ಮದ್ಯದ ಪರವಾನಗಿಗಾಗಿ ಬಿಡ್ಡಿಂಗ್ ಪ್ರಕ್ರಿಯೆಯಲ್ಲಿ 'ಕಾರ್ಟೆಲೈಸೇಶನ್' ಬಗ್ಗೆ ದೂರು ನೀಡಲಾಗಿದೆ.