ನವದೆಹಲಿ: ಇಸ್ಲಾಂ ವಿಶ್ವದಲ್ಲೇ ಅತ್ಯಂತ ಹಳೆಯ ಧರ್ಮ ಎನ್ನುವ ಮೂಲಕ ಜಮೈತ್ ಉಲೇಮಾ ಎ ಹಿಂದ್ ಮುಖ್ಯಸ್ಥ ಮಹಮೂದ್ ಮದನಿ ಹೊಸ ವಿವಾದವೊಂದನ್ನು ಸೃಷ್ಟಿಸಿದ್ದಾರೆ.
ಶುಕ್ರವಾರ ತಮ್ಮ ಸಂಘಟನೆಯ 34ನೇ ಸಾಮಾನ್ಯ ಸಭೆಯನ್ನು ಉದ್ದೇಶಿಸಿ ಮಾತನಾಡುವಾಗ ಈ ಹೇಳಿಕೆಯನ್ನು ನೀಡಿದ್ದಾರೆ.ಭಾರತ ನಮ್ಮ ದೇಶ. ಪ್ರಧಾನಿ ಮೋದಿ ಮತ್ತು ಆರ್ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರಿಗೆ ಭಾರತದ ಮೇಲೆ ಎಷ್ಟು ಹಕ್ಕಿದೆಯೋ ಅಷ್ಟೇ ಹಕ್ಕು ನಮಗೂ ಇದೆ. ಮಹಮೂದ್, ಅವರಿಗಿಂತ ಒಂದು ಇಂಚು ಮುಂದಿಲ್ಲ ಅಥವಾ ಮಹಮೂದ್‌ಗಿಂತ ಅವರು ಒಂದು ಇಂಚು ಮುಂದಿಲ್ಲ ಎಂದು ಹೇಳಿದರು.
ಮುಸ್ಲಿಮರಿಗೆ ಭಾರತ ಮೊದಲ ತಾಯ್ನಾಡು. ಭಾರತಕ್ಕೆ ಇಸ್ಲಾಂ ಧರ್ಮ ಹೊರಗಿನಿಂದ ಬಂದಿದೆ ಎಂಬುದು ಸುಳ್ಳು. ಹಿಂದಿ ಮುಸ್ಲಿಮರಿಗೆ ಭಾರತವು ಅತ್ಯುತ್ತಮ ದೇಶವಾಗಿದೆ. ಎಲ್ಲ ಧರ್ಮಗಳಿಗಿಂತ ಇಸ್ಲಾಂ ಧರ್ಮ ತುಂಬಾ ಹಳೆಯದು ಎಂದ ಮಹಮೂದ್ ದೇಶದಲ್ಲಿ ದ್ವೇಷ ಭಾಷಣ ಮತ್ತು ಇಸ್ಲಮೋಫೋಬಿಯಾ ಹೆಚ್ಚುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು.
ಸಭೆಯಲ್ಲಿ ಪ್ರಮುಖ ಮುಸ್ಲಿಂ ಸಂಘಟನೆಯಾದ ಜಮೈತ್ ಉಲೇಮಾ-ಎ-ಹಿಂದ್ ಸಂಘಟನೆಯು ಇಸ್ಲಾಮೋಫೋಬಿಯಾ ಹೆಚ್ಚುತ್ತಿದೆ ಎಂದು ಆರೋಪಿಸಿದೆ ಮತ್ತು ಅಲ್ಪಸಂಖ್ಯಾತರ ವಿರುದ್ಧ ಹಿಂಸಾಚಾರವನ್ನು ಪ್ರಚೋದಿಸುವವರನ್ನು ನಿರ್ದಿಷ್ಟವಾಗಿ ಶಿಕ್ಷಿಸಲು ಪ್ರತ್ಯೇಕ ಕಾನೂನನ್ನು ಜಾರಿಗೊಳಿಸಬೇಕೆಂದು ಒತ್ತಾಯಿಸಿತು. ಅತ್ಯಂತ ವಿಷಾದನೀಯ ಅಂಶವೆಂದರೆ ಈ ಬೆಳವಣಿಗೆಗಳ ಬಗ್ಗೆ ಸರ್ಕಾರಕ್ಕೆ ತಿಳಿದಿದ್ದರೂ, ಸರ್ಕಾರ ಸುಮ್ಮನಿದೆ ಎಂದು ಬೇಸರ ಹೊರಹಾಕಿದರು.
ಸಮಗ್ರತೆಯನ್ನು ಖಚಿತಪಡಿಸಿಕೊಳ್ಳಲು ಮತ್ತು ಭಾರತದ ಬಗ್ಗೆ ಸಕಾರಾತ್ಮಕ ಚಿತ್ರಣವನ್ನು ನಿರ್ಮಿಸುವ ಪ್ರಯತ್ನದಲ್ಲಿ ಸರ್ಕಾರದ ಗಮನವನ್ನು ಸೆಳೆಯಲು ಬಯಸುತ್ತದೆ ಎಂದು ಮುಸ್ಲಿಂ ಸಂಘಟನೆ ಹೇಳಿದೆ.