ಭವಾನಿಪಟ್ನ: ಒಡಿಶಾದ ಖ್ಯಾತ ಭಾಷಾಪರಿಣಿತ ಮತ್ತು ಜಾನಪದ ತಜ್ಞ ಮಹೇಂದ್ರ ಕುಮಾರ್ ಮಿಶ್ರಾ ಅವರು ಯುನೆಸ್ಕೊದ 'ಅಂತರ್‌ರಾಷ್ಟ್ರೀಯ ಮಾತೃಭಾಷಾ ಪ್ರಶಸ್ತಿ 2023ಕ್ಕೆ' ಭಾಜನರಾಗಿದ್ದಾರೆ.
ಭಾರತದಲ್ಲಿ ಮಾತೃಭಾಷೆಯನ್ನು ಪ್ರಚುರಪಡಿಸುವ ನಿಟ್ಟಿನಲ್ಲಿ ಅವರು ಸಲ್ಲಿಸಿರುವ ಸೇವೆಗಾಗಿ ಅವರಿಗೆ ಈ ಪ್ರಶಸ್ತಿ ನೀಡಲಾಗಿದೆ.
ಪ್ರಶಸ್ತಿ ಸಮಾರಂಭಕ್ಕೆ ಹಾಜರಾಗುವಂತೆ 'ಅಂತರರಾಷ್ಟ್ರೀಯ ಮಾತೃಭಾಷಾ ಸಂಸ್ಥೆ, ಢಾಕಾ'ದ ಪ್ರಧಾನ ನಿರ್ದೇಶಕರು ಮಿಶ್ರಾ ಅವರಿಗೆ ಅಧಿಕೃತ ಆಮಂತ್ರಣವನ್ನು ನೀಡಿದ್ದಾರೆ. ಫೆಬ್ರುವರಿ 21ರಂದು ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದ್ದು, ಬಾಂಗ್ಲಾದೇಶದ ಪ್ರಧಾನ ಶೇಖ್ ಹಸೀನಾ ಅವರು ಮಿಶ್ರಾ ಅವರಿಗೆ ಪದಕ ನೀಡಲಿದ್ದಾರೆ.
ಮಿಶ್ರಾ ಅವರು ಬಹುಭಾಷಾ ಶಿಕ್ಷಣದ (1996-2010) ಸಮನ್ವಯಾಧಿಕಾರಿಯಾಗಿದ್ದರು. ಪ್ರಾಥಮಿಕ ಶಾಲೆಗಳಲ್ಲಿ ಮಾತೃಭಾಷೆ ಆಧರಿತ ಬಹುಭಾಷಾ ಶಿಕ್ಷಣ ವ್ಯವಸ್ಥೆ ಜಾರಿಗೆ ತರಲು ಸಾಕಷ್ಟು ಶ್ರಮಿಸಿದ್ದರು. ನಶಿಸಿಹೋಗುತ್ತಿವೆ ಎನ್ನಲಾದ ಭಾಷೆಗಳನ್ನು ಶಾಲಾ ಪಠ್ಯಕ್ರಮದಲ್ಲಿ ಸೇರಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಜಾನಪದ ಸಾಹಿತ್ಯವನ್ನು ಶಾಲಾ ಪಠ್ಯಕ್ರಮದಲ್ಲಿ ಸೇರಿಸುವ ಇವರ ಪ್ರಯೋಗವು ಸಾಕಷ್ಟು ಪ್ರಶಂಸೆಗೆ ಒಳಗಾಗಿತ್ತು.
ಫೆಬ್ರುವರಿ 21ನ್ನು ಅಂತರ್‌ರಾಷ್ಟ್ರೀಯ ಮಾತೃಭಾಷಾ ದಿನ ಎಂದು ವಿಶ್ವಸಂಸ್ಥೆಯು 2000 ಇಸವಿಯಲ್ಲಿ ಘೋಷಿಸಿತ್ತು.
ಬಾಂಗ್ಲಾದೇಶವು ಸ್ವತಂತ್ರ ದೇಶವಾಗುವ ಮೊದಲು ಪೂರ್ವ ಪಾಕಿಸ್ತಾನದ ಮೇಲೆ ಉರ್ದು ಹೇರಿಕೆ ಇತ್ತು. ಇದರ ವಿರುದ್ಧ ಅಲ್ಲಿಯ ಜನತೆ ಹೋರಾಡಿ, ಬಾಂಗ್ಲಾವನ್ನು ಅಧಿಕೃತ ಭಾಷೆಯಾಗಿ ಸ್ವೀಕರಿಸಲಾಗಿತ್ತು. ಅದರ ಸ್ಮರಣಾರ್ಥ ಬಾಂಗ್ಲಾದೇಶದಲ್ಲಿ ಫೆ.21ನ್ನು ಭಾಷಾ ಚಳವಳಿ ದಿನ ಎಂದು ಆಚರಿಸಲಾಗುತ್ತದೆ.