ಮುಂಬೈ: 'ನೋವು ಇಲ್ಲದೆ ಆತ್ಮಹತ್ಯೆ ಮಾಡಿಕೊಳ್ಳುವುದು ಹೇಗೆ' ಎಂದು ವ್ಯಕ್ತಿಯೊಬ್ಬರು ಗೂಗಲ್‌ನಲ್ಲಿ ಹುಡುಕುತ್ತಿದ್ದಾರೆ ಎಂದು ಅಮೆರಿಕದ ಕಾನೂನು ಜಾರಿ ಸಂಸ್ಥೆಯಿಂದ ಬಂದ ಎಚ್ಚರಿಕೆಯ ನಂತರ ಮುಂಬೈ ಪೊಲೀಸರು 25 ವರ್ಷದ ವ್ಯಕ್ತಿಯನ್ನು ಪತ್ತೆ ಹಚ್ಚಿ, ಆತ್ಮಹತ್ಯೆ ಮಾಡಿಕೊಳ್ಳುವುದರಿಂದ ಆತನನ್ನು ರಕ್ಷಿಸಿದ್ದಾರೆ ಎಂದು ಅಧಿಕಾರಿಯೊಬ್ಬರು ಗುರುವಾರ ತಿಳಿಸಿದ್ದಾರೆ.
ಯುಎಸ್ ನ್ಯಾಷನಲ್ ಸೆಂಟ್ರಲ್ ಬ್ಯೂರೋ-ಇಂಟರ್‌ಪೋಲ್ ಹಂಚಿಕೊಂಡಿರುವ ಐಪಿ ವಿಳಾಸ ಮತ್ತು ಸ್ಥಳದಂತಹ ಪ್ರಮುಖ ಮಾಹಿತಿ ಆಧಾರದ ಮೇಲೆ ಮಂಗಳವಾರ ಮಧ್ಯಾಹ್ನ ಮುಂಬೈನ ಕುರ್ಲಾ ಪ್ರದೇಶದ ಐಟಿ ಕಂಪನಿಯೊಂದರಲ್ಲಿದ್ದ ವ್ಯಕ್ತಿಯನ್ನು ಪತ್ತೆಹಚ್ಚಲಾಯಿತು ಮತ್ತು ಪೊಲೀಸರು ಆತನನ್ನು ರಕ್ಷಿಸಲು ಸ್ಥಳಕ್ಕೆ ಧಾವಿಸಿ ಸಲಹೆ ನೀಡಿದ್ದಾರೆ ಎಂದು ಅವರು ಹೇಳಿದರು.
ಇ ಲ್ಲಿನ ಜೋಗೇಶ್ವರಿ ಪ್ರದೇಶದ ನಿವಾಸಿ ಹಾಗೂ ಖಾಸಗಿ ಕಂಪನಿಯೊಂದರಲ್ಲಿ ಐಟಿ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿರುವ ವ್ಯಕ್ತಿ, ಶಿಕ್ಷಣ ಮತ್ತು ಇತರೆ ಅಗತ್ಯಗಳಿಗಾಗಿ ವಿವಿಧ ಹಣಕಾಸು ಸಂಸ್ಥೆಗಳಿಂದ ಸಾಲ ಪಡೆದಿದ್ದ. ಗೃಹ ಸಾಲದ ಕಂತುಗಳನ್ನು ಪಾವತಿಸಲು ಸಾಧ್ಯವಾಗದೆ ಖಿನ್ನತೆಗೆ ಒಳಗಾಗಿದ್ದರು ಮತ್ತು ನೋವಿಲ್ಲದೆ ಆತ್ಮಹತ್ಯೆ ಮಾಡಿಕೊಳ್ಳುವುದು ಹೇಗೆ ಎಂದು ಆನ್‌ಲೈನ್‌ನಲ್ಲಿ ಹುಡುಕಲಾರಂಭಿಸಿದರು ಎಂದು ಅಧಿಕಾರಿ ತಿಳಿಸಿದ್ದಾರೆ.
ಅಮೆರಿಕ ಮೂಲದ ಏಜೆನ್ಸಿ ನವದೆಹಲಿಯ ಇಂಟರ್‌ಪೋಲ್ ಕಚೇರಿಗೆ ಈ ಬಗ್ಗೆ ಎಚ್ಚರಿಕೆ ನೀಡಿದ್ದು, ಮುಂಬೈ ಪೊಲೀಸರೊಂದಿಗೆ ಮಾಹಿತಿಯನ್ನು ಹಂಚಿಕೊಂಡಿದೆ ಎಂದು ಅವರು ಹೇಳಿದರು.
ಅದರಂತೆ, ಮುಂಬೈ ಅಪರಾಧ ವಿಭಾಗದ ಅಧಿಕಾರಿಗಳು ವ್ಯಕ್ತಿಯನ್ನು ಪತ್ತೆಹಚ್ಚಿ ಆತನ ಸ್ಥಳಕ್ಕೆ ಧಾವಿಸಿದ್ದಾರೆ. ನಂತರ ವ್ಯಕ್ತಿಯನ್ನು ಅಪರಾಧ ವಿಭಾಗದ ಕಚೇರಿಗೆ ಕರೆತಂದು ಕೌನ್ಸೆಲಿಂಗ್ ಮಾಡಲಾಗಿತ್ತು. ಈ ಹಿಂದೆಯೂ ಆತ ಮೂರ್ನಾಲ್ಕು ಬಾರಿ ಆತ್ಮಹತ್ಯೆಗೆ ಪ್ರಯತ್ನಿಸಿದ್ದರು ಎಂದು ಅಧಿಕಾರಿ ತಿಳಿಸಿದ್ದಾರೆ.
ಕೌನ್ಸಿಲಿಂಗ್ ನಂತರ, ವ್ಯಕ್ತಿಯನ್ನು ಅವನ ಹೆತ್ತವರೊಂದಿಗೆ ಮನೆಗೆ ಕಳುಹಿಸಲಾಯಿತು ಮತ್ತು ಮಾನಸಿಕ ಚಿಕಿತ್ಸೆಗೆ ಒಳಗಾಗಲು ಸಲಹೆ ನೀಡಲಾಯಿತು ಎಂದು ಅವರು ಹೇಳಿದರು.