ಉಪ್ಪಳ: ಒಂದು ವಿಭಾಗದ ಜನರನ್ನು ಅವಗಣಿಸುವ ಮೂಲಕ ಮಂಜೇಶ್ವರ ವಿಧಾನಸಭಾ ಕ್ಷೇತ್ರದ ಶಾಸಕರು ಸರ್ಕಾರದ ನಿಧಿಯನ್ನು ವಿನಿಯೋಗಿಸುತ್ತಿದ್ದು, ಇದರಿಂದ ವಿಧಾನಸಭಾ ಕ್ಷೇತ್ರದ ಅಭಿವೃದ್ಧಿ ಕುಂಠಿತಗೊಳ್ಳಲು ಕಾರಣವಾಗಿದೆ ಎಮದು ಬಿಜೆಪಿ ರಾಜ್ಯ ಸಮಿತಿ ಅಧ್ಯಕ್ಷ ಕೆ. ಸುರೇಂದ್ರನ್
ಆರೋಪಿಸಿದ್ದಾರೆ.
ಅವರು ಮಂಜೇಶ್ವರ ಕ್ಷೇತ್ರದ ಶಾಸಕರ ನಿರ್ಲಕ್ಷ್ಯವನ್ನು ಪ್ರತಿಭಟಿಸಿ ಬಿಜೆಪಿ ಮಂಜೇಶ್ವರ ಕ್ಷೇತ್ರ ಸಮಿತಿ ವತಿಯಿಂದ ಮಂಗಳವಾರ ಉಪ್ಪಳದಲ್ಲಿ ಆಯೋಜಿಸಲಾಗಿದ್ದ ಶಾಸಕರ ಕಛೇರಿಗೆ ನಡೆದ ಪಾದಯಾತ್ರೆ ಉದ್ಘಾಟಿಸಿ ಅವರು ಮಾತನಾಡಿದರು.
ವಿಧಾನಸಭಾ ಕ್ಷೇತ್ರದ ಯಾವ ಮೂಲೆಗೆ ಸಂಚರಿಸಿದರೂ ತ್ಯಾಜ್ಯದ ದರ್ಶನವಾಗುತ್ತಿದೆ. ಮಂಜೇಶ್ವರದಲ್ಲಿ 25 ಮಿಲಿಯನ್ ಟನ್ ಕಸ ಸಂಗ್ರಹವಾಗಿದೆ. ಮೂಲಸೌಕರ್ಯ ಅಭಿವೃದ್ಧಿಗೆ ಯಾವುದೇ ಯೋಜನೆ ತಂದಿಲ್ಲ. ಇಲ್ಲಿ ಜನರಿಗಾಗಿ ಏನನ್ನೂ ಮಾಡದ ಶಾಸಕ ದುರಹಂಕಾರದಿಂದ ವರ್ತಿಸುತ್ತಿದ್ದಾರೆ. ಕಸ ವಿಲೇವಾರಿ, ಕುಡಿಯುವ ನೀರಿನ ಸಮಸ್ಯೆ ಬಗ್ಗೆ ತಲೆ ಕೆಡಿಸಿಕೊಳ್ಳದ ಶಾಸಕ ಎ.ಕೆ.ಎಂ ಅಶ್ರಫ್ ತನ್ನ ಕ್ಷೇತ್ರದ ಅಭಿವೃದ್ಧಿಯನ್ನು ಮರೆತಿದ್ದಾರೆ.
ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಕಾಮಗಾರಿ ಸಂದರ್ಭ ಕೆಳಸೇತುವೆ ವಿಚಾರ ಬಂದಾಗ ಅದನ್ನು ನಿಭಾಯಿಸಲು ಶಾಸಕರಾಗಲಿ, ಸಂಸದರಾಗಲಿ ಜನರ ಬಳಿ ಬರಲಿಲ್ಲ. ಬಿಜೆಪಿ ಕಾರ್ಯಕರ್ತರು ಕೇಂದ್ರ ಸರ್ಕಾರವನ್ನು ಸಂಪರ್ಕಿಸಿ ಸಮಸ್ಯೆ ಬಗೆಹರಿಸಿದ್ದಾರೆ. ಯಕ್ಷಗಾನ ಕುಲಪತಿ ಪಾರ್ತಿಸುಬ್ಬನ ಹೆಸರಿನಲ್ಲಿ ಕುಂಬಳೆ ಮುಜುಂಗಾವಿನಲ್ಲಿ ಆರಂಭವಾದ ಯಕ್ಷಗಾನ ತರಬೇತಿ ಕೇಂದ್ರದ ಸ್ಥಿತಿ ಶೋಚನೀಯವಾಗಿದೆ. ಕೇಂದ್ರ ಸರ್ಕಾರ ಜಲಜೀವನ್ ಮಿಷನ್ ಅಡಿಯಲ್ಲಿ ಸಾವಿರಾರು ಕೋಟಿ ರೂಪಾಯಿ ಬಿಡುಗಡೆ ಮಾಡಿದಾಗ ಮಂಜೇಶ್ವರದಲ್ಲಿ ಇದರ ಯಾವುದೇ ಯೋಜನೆ ಜಾರಿಯಾಗಿಲ್ಲ ಎಂದು ಸುರೇಂದ್ರನ್ ತಿಳಿಸಿದರು.
ಬಿಜೆಪಿ ಜಿಲ್ಲಾಧ್ಯಕ್ಷ ರವೀಶ ತಂತ್ರಿ ಕುಂಟಾರು ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಕಾರ್ಯದರ್ಶಿ ಮನು ಮೇಲತ್, ಮಣಿಕಂದರೈ, ಪುಷ್ಪಾ ಅಮೆಕ್ಕಳ, ಉತ್ತರ ವಲಯ ಕಾರ್ಯದರ್ಶಿ ಪಿ. ಸುರೇಶ್ ಕುಮಾರ್ ಶೆಟ್ಟಿ, ರಾಜ್ಯ ಸಮಿತಿ ಸದಸ್ಯ ಸತೀಶ್ ಚಂದ್ರಭಂಡಾರಿ, ಮಹಿಳಾ ಮೋರ್ಚಾ ರಾಷ್ಟ್ರೀಯ ಸಮಿತಿ ಸದಸ್ಯ ಎಂ. ಆದರ್ಶ್, ಸುನೀಲ್ ಅನಂತಪುರಂ ಹಾಗೂ ಜಿಲ್ಲಾ ಸಮಿತಿ ಸದಸ್ಯ ಮುರಳೀಧರಯಾದವ್ ಉಪಸ್ಥಿತರಿದ್ದರು. ಉಪ್ಪಳ ಕೈಕಂಬದಿಂದ ಹೊರಟ ಮೆರವಣಿಗೆಯಲ್ಲಿ ಪಕ್ಷದ ನೂರಾರು ಮಂದಿ ಕಾರ್ಯಕರ್ತರು ಭಾಗವಹಿಸಿದ್ದರು. ಕಚೇರಿ ಬಳಿ ಮೆರವಣಿಗೆ ತಲುಪುತ್ತಿದ್ದಂತೆ ಪೆÇಲೀಸರು ತಡೆದರು.