ಮುಂಬೈ: ಔರಂಗಾಬಾದ್ ಹಾಗೂ ಒಸ್ಮನಾಬಾದ್ ನಗರಗಳಿಗೆ ಕ್ರಮವಾಗಿ ಛತ್ರಪತಿ ಸಂಭಾಜಿನಗರ ಹಾಗೂ ಧಾರಾಶಿವ ಎಂದು ಮರು ನಾಮಕರಣ ಮಾಡಲಾಗಿದ್ದು, ಈ ಪ್ರಸ್ತಾವನೆಗೆ ನಮ್ಮ ಯಾವುದೇ ಆಕ್ಷೇಪ ಇಲ್ಲದೆ ಇದ್ದುದರಿಂದ ನಗರಗಳ ಮರು ನಾಮಕರಣ ಮಾಡಲಾಗಿದೆ ಎಂದು ಶುಕ್ರವಾರ ಕೇಂದ್ರ ಗೃಹ ವ್ಯವಹಾರಗಳ ಸಚಿವಾಲಯ ತಿಳಿಸಿದೆ indianexpress.com ವರದಿ ಮಾಡಿದೆ.
ಇದಕ್ಕೂ ಮುನ್ನ ಫೆಬ್ರವರಿಯಲ್ಲಿ ಉಸ್ಮನಾಬಾದ್ ನಗರಕ್ಕೆ ಮರು ನಾಮಕರಣ ಮಾಡಲು ಕೇಂದ್ರ ಸರ್ಕಾರದ ಯಾವುದೇ ಆಕ್ಷೇಪವಿಲ್ಲ. ಆದರೆ, ಔರಂಗಾಬಾದ್ ಮರು ನಾಮಕರಣದ ಬಗ್ಗೆ ಈವರೆಗೆ ಯಾವುದೇ ನಿರ್ಣಯ ಕೈಗೊಳ್ಳಲಾಗಿಲ್ಲ ಎಂದು ಹೆಚ್ಚುವರಿ ಸಾಲಿಸಿಟರ್ ಜನರಲ್ ಅನಿಲ್ ಸಿಂಗ್ ಅವರು ಬಾಂಬೆ ಹೈಕೋರ್ಟ್‌ಗೆ ತಿಳಿಸಿದ್ದರು. ಈ ಎರಡು ನಗರಗಳ ಮರು ನಾಮಕರಣವನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿ ವಿಚಾರಣೆಯನ್ನು ಪ್ರಭಾರಿ ಮುಖ್ಯ ನ್ಯಾಯಮೂರ್ತಿ ಸಂಜಯ್ ವಿ. ಗಂಗಾಪುರ್ವಾಲಾ ಹಾಗೂ ನ್ಯಾ. ಸಂದೀಪ್ ವಿ. ಮಾರ್ನೆ ಅವರನ್ನೊಳಗೊಂಡಿದ್ದ ನ್ಯಾಯಪೀಠ ನಡೆಸುತ್ತಿತ್ತು.
ಮುಖ್ಯಮಂತ್ರಿ ಹುದ್ದೆಯಿಂದ ಕೆಳಗಿಳಿಯುವ ಮುನ್ನ ಜೂನ್ 29, 2022ರಂದು ಮಹಾ ವಿಕಾಸ್ ಅಘಾಡಿ ಸರ್ಕಾರದ ನೇತೃತ್ವ ವಹಿಸಿದ್ದ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಸಮ್ಮುಖದಲ್ಲಿ ಸಚಿವ ಸಂಪುಟವು ಔರಂಗಾಬಾದ್‌ಗೆ ಛತ್ರಪತಿ ಸಂಭಾಜಿನಗರ ಹಾಗೂ ಉಸ್ಮಾನಾಬಾದ್ ಗೆ ಧಾರಾಶಿವ ಎಂದು ಮರು ನಾಮಕರಣ ಮಾಡುವ ನಿರ್ಣಯ ಕೈಗೊಂಡಿತ್ತು. ಉದ್ಧವ್ ಠಾಕ್ರೆ ಸರ್ಕಾರ ಕೈಗೊಂಡ ಅಂತಿಮ ನಿರ್ಧಾರ ಇದಾಗಿತ್ತು.
ಇದಾದ ನಂತರ, ಮಹಾ ವಿಕಾಸ್ ಅಘಾಡಿ ಸರ್ಕಾರ ಬಹುಮತ ಕಳೆದುಕೊಂಡ ನಂತರ ಈ ನಿರ್ಧಾರ ಕೈಗೊಂಡಿರುವುದರಿಂದ ಇದು ಕಾನೂನುಬಾಹಿರ ನಿರ್ಧಾರವೆಂದು ಮುಖ್ಯಮಂತ್ರಿ ಏಕ್‌ನಾಥ್ ಶಿಂದೆ ಪ್ರತಿಪಾದಿಸಿದ್ದರು. ನಂತರ ಜುಲೈ 16, 2022ರಂದು ಔರಂಗಾಬಾದ್ ಮತ್ತು ಉಸ್ಮಾನಾಬಾದ್ ನಗರಗಳಿಗೆ ಕ್ರಮವಾಗಿ ಛತ್ರಪತಿ ಸಂಭಾಜಿನಗರ ಹಾಗೂ ಧಾರಾಶಿವ ಎಂದು ಮರು ನಾಮಕರಣ ಮಾಡುವ ಪ್ರಸ್ತಾವನೆಯನ್ನು ಏಕ್‌ನಾಥ್ ಶಿಂದೆ ಸರ್ಕಾರ ಅನುಮೋದಿಸಿತ್ತು.
ಇದಕ್ಕೂ ಮುನ್ನ, ಶಿವಸೇನೆ ಮತ್ತು ಬಿಜೆಪಿಯಂಥ ಪಕ್ಷಗಳು ಔರಂಗಾಬಾದ್ ಹಾಗೂ ಉಸ್ಮಾನಾಬಾದ್ ನಗರಗಳ ಮರು ನಾಮಕರಣವಾಗಬೇಕು ಎಂದು ಪಟ್ಟು ಹಿಡಿದಿದ್ದವು.