ಕಾಸರಗೋಡು: ಕೇರಳ ರಾಜ್ಯ ಡ್ರಗ್ಸ್ ಕಂಟ್ರೋಲ್ ಇಲಾಖೆ ಅಧಿಕಾರಿಗಳು ಕಾಸರಗೋಡು ಮತ್ತು ಕಣ್ಣೂರು ಜಿಲ್ಲೆಯ ವಿವಿಧ ಕೇಂದ್ರಗಳಲ್ಲಿ 'ಆಪರೇಶನ್ ಸೌಂದರ್ಯ'ಹೆಸರಿನ ಕಾರ್ಯಾಚರಣೆ ನಡೆಸಿ, ವಿವಿಧ ದೇಶಗಳ ನಕಲಿ ಲೇಬಲ್ ಬಳಸಿ ಮಾರಾಟ ನಡೆಸುತ್ತಿದ್ದ ಸೌಂದರ್ಯವರ್ದಕ ಸಾಮಗ್ರಿಗಳನ್ನು ವಶಪಡಿಸಿಕೊಂಡಿದ್ದಾರೆ.
ರಾಜ್ಯ ಡ್ರಗ್ಸ್ ಕಂಟ್ರೋಲ್ ಇಲಾಖೆ ಚೀಫ್ ಇನ್ಸ್‍ಪೆಕ್ಟರ್(ಇಂಟೆಲಿಜೆನ್ಸ್ ಸ್ಕ್ವೇಡ್)ಎಂ. ಅನಿಲ್ ಕುಮಾರ್ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿದೆ. ಕಾಸರಗೋಡಿನ ಪ್ರೆಸ್‍ಕ್ಲಬ್ ಜಂಕ್ಷನ್ ವಠಾರ, ಕಣ್ಣೂರು ಜಿಲ್ಲೆಯ ತಳಿಪರಂಬ ಮಾರ್ಕೆಟ್ ರಸ್ತೆ, ಕಣ್ಣೂರಿನ ಬ್ಯಾಂಕ್ ರಸ್ತೆಯ ವಿವಿಧ ಅಂಗಡಿಗಳಿಗೆ ದಾಳಿ ನಡೆಸಲಾಗಿದೆ. ದೇಹದ ಚರ್ಮ ಬಿಳುಪುಗೊಳಿಸುವ ಹೆಸರಲ್ಲಿ ವಿವಿಧ ರೀತಿಯ ಕ್ರೀಮುಗಳು, ಫೇಸ್ ಲೋಶನ್, ಶ್ಯಾಂಪು, ಸಾಬೂನು, ನೈಲ್ ಪಾಲಿಶ್ ಸೇರಿದಂತೆ 1.20ಲಕ್ಷ ರೂ. ಮೌಲ್ಯದ ನಾನಾ ಸೌಂದರ್ಯವರ್ದಕ ಉತ್ಪನ್ನಗಳನ್ನು ವಶಪಡಿಸಿಕೊಳ್ಳಲಾಗಿದೆ. ಪಾಕಿಸ್ತಾನ, ತುರ್ಕಿ ಸೇರಿದಂತೆ ವಿವಿಧ ದೇಶಗಳ ನಕಲಿ ಲೇಬಲ್ ಲಗತ್ತಿಸಿ ಇವುಗಳನ್ನು ಮಾರಾಟ ಮಾಡಲಾಗುತ್ತಿತ್ತು.ಕಾಸರಗೋಡು ಜಿಲ್ಲಾ ಡ್ರಗ್ಸ್ ಇನ್ಸ್‍ಪೆಕ್ಟರ್(ಇಂಟೆಲಿಜೆನ್ಸ್)ಬಿ. ಬೇಬಿ, ಡಾ. ಬಿ. ಫೈಸಲ್, ಕಣ್ಣೂರು ಜಿಲ್ಲಾ ಇನ್ಸ್‍ಪೆಕ್ಟರ್ ಇ.ಎನ್ ಬಿಜಿನ್, ಪಿ.ಎಂ. ಸಂತೋಷ್ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.
'ಆಪರೇಶನ್ ಸೌಂದರ್ಯ': ಕಾರ್ಯಾಚರಣೆಯಲ್ಲಿ ನಕಲಿ ಸೌಂದರ್ಯವರ್ದಕ ಸಾಮಗ್ರಿವಶ
0
ಫೆಬ್ರವರಿ 17, 2023