ಬೆಂಗಳೂರು: ಸಾಹಿತಿಗಳಾದ ಸಿ.ಪಿ. ಕೃಷ್ಣಕುಮಾರ್, ಡಾ.ಬಾಬು ಕೃಷ್ಣಮೂರ್ತಿ ಮತ್ತು ಡಾ.ಎಸ್.ಆರ್.ರಾಮಸ್ವಾಮಿ ಅವರನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ನೀಡುವ 'ಪಂಪ' ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.
2020-21, 2021-22 ಮತ್ತು 2022-23ನೇ ಸಾಲಿನ 'ಪಂಪ' ಪ್ರಶಸ್ತಿ ಪುರಸ್ಕೃತರ ಆಯ್ಕೆಗಾಗಿ ಡಾ.ಜಿ.ಬಿ.ಹರೀಶ್ ಅಧ್ಯಕ್ಷತೆಯಲ್ಲಿ ಆಯ್ಕೆ ಸಮಿತಿ ರಚಿಸಲಾಗಿತ್ತು.
ಸಮಿತಿಯ ಶಿಫಾರಸಿನಂತೆ 2020-21ನೇ ಸಾಲಿಗೆ ಸಿ.ಪಿ.ಕೃಷ್ಣಕುಮಾರ್, 2021-22ನೇ ಸಾಲಿಗೆ ಬಾಬು ಕೃಷ್ಣಮೂರ್ತಿ ಮತ್ತು 2022-23ನೇ ಸಾಲಿನ ಪ್ರಶಸ್ತಿಗೆ ಎಸ್.ಆರ್.ರಾಮಸ್ವಾಮಿ ಅವರನ್ನು ಆಯ್ಕೆಮಾಡಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸೋಮವಾರ ಆದೇಶ ಹೊರಡಿಸಿದೆ.
ಪ್ರಶಸ್ತಿಯು ₹ 5 ಲಕ್ಷ ನಗದು ಮತ್ತು ಫಲಕವನ್ನು ಒಳಗೊಂಡಿರುತ್ತದೆ ಎಂದು ಇಲಾಖೆಯ ಮೂಲಗಳು ತಿಳಿಸಿವೆ.
ಕುವೆಂಪು, ಶಿವರಾಮ ಕಾರಂತ, ಪುತಿನ, ಕೆ.ಎಸ್.ನರಸಿಂಹಸ್ವಾಮಿ, ಪೂರ್ಣಚಂದ್ರ ತೇಜಸ್ವಿ, ಎಸ್.ಎಲ್.ಭೈರಪ್ಪ, ನಿಸಾರ್ ಅಹ್ಮದ್, ಸಿದ್ದಲಿಂಗಯ್ಯ ಸೇರಿದಂತೆ 33 ಸಾಹಿತಿಗಳು ಈ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಮೂರು ಲಕ್ಷ ನಗದು ಒಳಗೊಂಡ ಈ ಪ್ರಶಸ್ತಿಯನ್ನು ಸರ್ಕಾರ ಕೊಡುವ ಅತ್ಯುನ್ನತ ಸಾಹಿತ್ಯ ಪ್ರಶಸ್ತಿ ಎಂದು ಪರಿಗಣಿಸಲಾಗಿದೆ.