ನವದೆಹಲಿ: ಅದಾನಿ-ಹಿಂಡೆನ್‌ಬರ್ಗ್ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಭಾರತೀಯ ಹೂಡಿಕೆದಾರರು ಅನುಭವಿಸಿರುವ ಒಟ್ಟು ನಷ್ಟದ ಪ್ರಮಾಣ ಅನೇಕ ಲಕ್ಷ, ಕೋಟಿಯಷ್ಟಾಗಿದೆ ಎಂದಿರುವ ಸುಪ್ರೀಂಕೋರ್ಟ್, ಅದಾನಿ ಷೇರುಗಳ ಸೋಲಿನಂತಹ ನಿದರ್ಶನಗಳಿಂದ ಭಾರತೀಯ ಹೂಡಿಕೆದಾರರನ್ನು ರಕ್ಷಿಸಲು ನಿಯಂತ್ರಣ ಚೌಕಟ್ಟಿನೊಳಗೆ ಅಗತ್ಯ ಬದಲಾವಣೆಗಳೊಂದಿಗೆ ಮರಳುವಂತೆ ಸೆಬಿಗೆ ಸೂಚಿಸಿದೆ.
ಷೇರು ಮಾರುಕಟ್ಟೆ ಈಗ ದೊಡ್ಡ ಹೂಡಿಕೆದಾರರಿಂದ ಮಾತ್ರವಲ್ಲದೆ ಮಧ್ಯಮ ವರ್ಗದವರೂ ಹೂಡಿಕೆ ಮಾಡುವ ಸ್ಥಳವಾಗಿದೆ ಎಂದು ಗಮನಿಸಿದ ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ಮತ್ತು ನ್ಯಾಯಮೂರ್ತಿಗಳಾದ ಪಿ ಎಸ್ ನರಸಿಂಹ ಮತ್ತು ಜೆಬಿ ಪಾರ್ದಿವಾಲಾ ಅವರನ್ನೊಳಗೊಂಡ ನ್ಯಾಯಪೀಠ, ಇಂತಹ ಹೊಡೆತಗಳಿಂದ ಹೂಡಿಕೆದಾರರನ್ನು ರಕ್ಷಿಸುವುದು ಸುಪ್ರೀಂಕೋರ್ಟ್ ನ ಪ್ರಾಥಮಿಕ ಆದ್ಯತೆಯಾಗಿದೆ ಎಂದು ಹೇಳಿತು.
ಭಾರತೀಯ ಹೂಡಿಕೆದಾರರು ಅನುಭವಿಸಿದ ಒಟ್ಟು ನಷ್ಟದ ಪ್ರಮಾಣ ಹಲವಾರು ಲಕ್ಷ ಕೋಟಿಗಳಷ್ಟಾಗಿದೆ. ಭವಿಷ್ಯದಲ್ಲಿ (ಇದನ್ನು ಸರಿಪಡಿಸುವ ಬಗ್ಗೆ) ನಾವು ಹೇಗೆ ಖಚಿತಪಡಿಸಿಕೊಳ್ಳುತ್ತೇವೆ? ನಾವು ದೃಢವಾದ ಕಾರ್ಯವಿಧಾನವನ್ನು ಹೊಂದಿದ್ದೇವೆಯೇ? ಇಂದು ಬಂಡವಾಳ ಮನಬಂದಂತೆ ಚಲಿಸುತ್ತಿದ್ದು, ಭಾರತೀಯ ಹೂಡಿಕೆಗಳನ್ನು ಹೇಗೆ ರಕ್ಷಿಸಬಹುದು ಎಂಬುದನ್ನು ಖಾತ್ರಿಪಡಿಸಿಕೊಳ್ಳಬೇಕು ಎಂದು ತಿಳಿಸಿತು.
ಅದಾನಿ ಸಂಸ್ಥೆಗಳ ಮೇಲಿನ ಹಿಂಡೆನ್‌ಬರ್ಗ್ ಸಂಶೋಧನಾ ವರದಿಯ ತನಿಖೆಗೆ ಕೋರಿ ಸಲ್ಲಿಸಲಾದ ಅರ್ಜಿ ವಿಚಾರಣೆ ಸಂದರ್ಭದಲ್ಲಿ ಮಾತನಾಡಿದ ಸಿಜೆಐ ಡಿವೈ ಚಂದ್ರಚೂಡ್, ಇವರು ಸಣ್ಣ ಹೂಡಿಕೆದಾರರು, ಅವರನ್ನು ರಕ್ಷಿಸಲಾಗಿದೆ ಎಂದು ನೀವು ಹೇಗೆ ಖಚಿತಪಡಿಸುತ್ತೀರಿ? ಭವಿಷ್ಯದಲ್ಲಿ ಅವರನ್ನು ಹೇಗೆ ರಕ್ಷಿಸಲಾಗುತ್ತದೆ? ಇದರಲ್ಲಿ ಸೆಬಿಗೆ ಯಾವ ರೀತಿಯ ಪಾತ್ರವನ್ನು ನಾವು ಕಲ್ಪಿಸಬೇಕು ಎಂದು ಹೇಳಿದರು.
ಅಸ್ತಿತ್ವದಲ್ಲಿರುವ ಹಣಕಾಸು ಕಾರ್ಯವಿಧಾನಗಳನ್ನು ಬಲಪಡಿಸಲು ಹಣಕಾಸು ಕ್ಷೇತ್ರದ ತಜ್ಞರನ್ನೊಳಗೊಂಡ ಸಮಿತಿಯನ್ನು ರಚಿಸಬೇಕು ಎಂದು ಸಲಹೆ ನೀಡಿದ ನ್ಯಾಯಪೀಠ, ಇಂತಹ ಸಮಸ್ಯೆಗಳನ್ನು ವ್ಯವಹರಿಸಲು ಸೆಬಿಯು ತನ್ನಲ್ಲಿರುವ ಶಕ್ತಿ ಮತ್ತು ಅದಕ್ಕೆ ಅಗತ್ಯವಿರುವ ಅಧಿಕಾರಗಳನ್ನು ವಿಶ್ಲೇಷಿಸುವಂತೆ ತಿಳಿಸಿತು.
ಮುಂದಿನ ಸೋಮವಾರದೊಳಗೆ ವಾಸ್ತವಿಕ ಮತ್ತು ಕಾನೂನಿನ ಅಂಶಗಳ ಬಗ್ಗೆ ಸಂಕ್ಷಿಪ್ತ ಟಿಪ್ಪಣಿ ಸಲ್ಲಿಸುವಂತೆ ಸಾಲಿಸಿಟರ್ ಜನರಲ್ ಗೆ ನ್ಯಾಯಪೀಠ ಸೂಚಿಸಿತು.