ಶ್ರೀನಗರ: ಜಮ್ಮು ಮತ್ತು ಕಾಶ್ಮೀರದಲ್ಲಿ ಪರೋಕ್ಷ ಯುದ್ಧ ನಡೆಸುತ್ತಿರುವ ಪಾಕಿಸ್ತಾನ ಈಗ ಮಾದಕವಸ್ತುಗಳನ್ನು ತನ್ನ ಭಯೋತ್ಪಾದನಾ ಅಸ್ತ್ರವಾಗಿ ಬಳಸುತ್ತಿದೆ ಎಂದು ಸೇನೆಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಸೇನೆಯ ಉತ್ತರ ವಲಯದ ಕಮಾಂಡ್‌ನ ಮುಖ್ಯಸ್ಥ, ಲೆಫ್ಟಿನಂಟ್ ಜನರಲ್ ಉಪೇಂದ್ರ ದ್ವಿವೇದಿ ಅವರು, 'ಡ್ರೋನ್ ಮೂಲಕ ಮಾದಕ ವಸ್ತುಗಳನ್ನು ಪಾಕ್ ರವಾನಿಸುತ್ತಿದ್ದು, ಈ ಮೂಲಕ ಸಾಮಾಜಿಕ ಪರಿಸರ ಹಾಳು ಮಾಡುವ ಗುರಿ ಹೊಂದಿದೆ' ಎಂದರು.
ದೇಶದ ಭದ್ರತೆ ಕುರಿತಂತೆ ಆಂತರಿಕ ಮತ್ತು ಬಾಹ್ಯ ಸ್ವರೂಪದಲ್ಲಿ ಎದುರಾಗುವ ಭಿನ್ನ ಸವಾಲುಗಳನ್ನು ಎದುರಿಸಲು ಸಜ್ಜಾಗಿರಬೇಕು ಎಂದು ಅವರು ಸೇನೆಯ ವಿವಿಧ ಹಂತದ ತುಕಡಿಗಳಿಗೆ ಕರೆ ನೀಡಿದರು.
ಕಾಶ್ಮೀರದದಲ್ಲಿ ದಿನೇ ದಿನೇ ಮಾದಕವಸ್ತು ಬೆಂಬಲಿತ ಭಯೋತ್ಪಾದನೆ ಹೆಚ್ಚುತ್ತಿದೆ. ನೆರೆಯ ಪಾಕಿಸ್ತಾನ ಇದನ್ನೇ ಅಸ್ತ್ರವಾಗಿ ಪರೋಕ್ಷ ಯುದ್ಧ ನಡೆಸಲು ಬಳಸುತ್ತಿದೆ. ಸ್ಥಳೀಯವಾಗಿ ಸಾಮಾಜಿಕ ಪರಿಸರಕ್ಕೆ ಧಕ್ಕೆ ತರುವುದೇ ಇದರ ಉದ್ದೇಶ ಎಂದರು.
ಈ ಬೆಳವಣಿಗೆಗಳ ಬಗ್ಗೆ ಭದ್ರತಾ ಪಡೆಗಳಿಗೆ ಅರಿವಿದೆ. ಇದನ್ನು ತಡೆಯಲು ಈಗಾಗಲೇ ಕ್ರಮವಹಿಸಿದೆ. ಗಡಿರೇಖೆಯುದ್ದಕ್ಕೂ ಪರಿಸ್ಥಿತಿ ನಿಯಂತ್ರಣದಲ್ಲಿದ್ದು, ಪಾಕಿಸ್ತಾನದ ಜೊತೆಗಿನ ಕದನವಿರಾಮ ಒಡಂಬಡಿಕೆ ಮುಂದುವರಿದಿದೆ ಎಂದು ಹೇಳಿದರು.
ಕಟ್ಟೆಚ್ಚರ ವಹಿಸಿದ್ದು, ತಂತ್ರಜ್ಞಾನ ಬೆಂಬಲದಲ್ಲಿ ಬಹುಹಂತದ ತಪಾಸಣೆ ಮುಂದುವರಿದಿದೆ. ಯಾವುದೇ ರೀತಿಯಲ್ಲಿ ಒಳನುಸುಳುವಿಕೆ ತಡೆಗೆ ಕ್ರಮವಹಿಸಲಾಗಿದೆ. ಕದನವಿರಾಮ ಉಲ್ಲಂಘನೆ, ಒಳನುಸುಳುವಿಕೆ ಯತ್ನ ಸೇರಿದಂತೆ ಯಾವುದೇ ದುಸ್ಸಾಹಸಕ್ಕೆ ಸೇನೆಯು ತಕ್ಕ ಉತ್ತರ ನೀಡಲು ಸಜ್ಜಾಗಿದೆ ಎಂದು ಹೇಳಿದರು.