ಲಖನೌ: ಮಥುರಾದ ಶಾಹಿ ಈದ್ಗಾ ಮಸೀದಿ ಅಕ್ರಮವಾಗಿ ವಿದ್ಯುತ್ ಸಂಪರ್ಕ ಹೊಂದಿರುವುದಾಗಿ ಎಫ್‌ಐಆರ್ ದಾಖಲಿಸಲಾಗಿದ್ದು, ವಿದ್ಯುತ್ ಸಂಪರ್ಕವನ್ನು ಭಾನುವಾರ ಕಡಿತಗೊಳಿಸಲಾಗಿದೆ.
ಶಾಹಿ ಈದ್ಗಾ ಮಸೀದಿ ಸಮಿತಿಯ ಕಾರ್ಯದರ್ಶಿ ತನ್ವೀರ್ ಅಹ್ಮದ್ ಅವರಿಂದ ದಂಡವನ್ನೂ ವಸೂಲಿ ಮಾಡಲಾಗಿದೆ.
ಅಕ್ರಮ ವಿದ್ಯುತ್ ಸಂಪರ್ಕದ ವಿರುದ್ಧ ರಾಜ್ಯದಲ್ಲಿ ನಡೆಯುತ್ತಿರುವ ಅಭಿಯಾನದ ಭಾಗವಾಗಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಉತ್ತರ ಪ್ರದೇಶ ಸರ್ಕಾರವು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದೆ.
ಮಥುರಾ ಜಿಲ್ಲಾ ಪೊಲೀಸ್ ಮತ್ತು ಇಂಧನ ಇಲಾಖೆಯ ಜಂಟಿ ತಂಡ ಮಸೀದಿಯ ವಿದ್ಯುತ್ ಸಂಪರ್ಕ ಕಡಿತಗೊಳಿಸಿದೆ. 'ವಿದ್ಯುತ್ ಕಾಯ್ದೆ-2003'ರ ಸೆಕ್ಷನ್ 135 ರ ಅಡಿಯಲ್ಲಿ ಕೃಷ್ಣ ನಗರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ಕೂಡ ದಾಖಲಾಗಿದೆ.
'ಶ್ರೀ ಕೃಷ್ಣ ಜನ್ಮಭೂಮಿ ಮುಕ್ತಿ ನಿರ್ಮಾಣ ಟ್ರಸ್ಟ್'ನ ದೂರಿನ ಮೇರೆಗೆ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಸರ್ಕಾರದ ಹೇಳಿಕೆಯಲ್ಲಿ ಉಲ್ಲೇಖಿಸಲಾಗಿದೆ.
'ಶ್ರೀ ಕೃಷ್ಣ ಜನ್ಮಭೂಮಿ ಮುಕ್ತಿ ನಿರ್ಮಾಣ ಟ್ರಸ್ಟ್' ಮತ್ತು ಶಾಹಿ ಈದ್ಗಾ ಮಸೀದಿಯ ನಡುವೆ ಆಸ್ತಿ ವಿವಾದ ಏರ್ಪಟ್ಟಿದ್ದು, ಕಾನೂನು ಹೋರಾಟ ನಡೆಯುತ್ತಿದೆ.