ನವದೆಹಲಿ : 'ದೇಶದಲ್ಲಿ ಆಳ್ವಿಕೆ ನಡೆಸಿದ್ದ ಆಕ್ರಮಣಕಾರರು ಹೆಸರು ಬದಲಿಸಿರುವ ಪುರಾತನ, ಸಾಂಸ್ಕೃತಿಕ, ಧಾರ್ಮಿಕ ಸ್ಥಳಗಳಿಗೆ ಹಳೆಯ ಹೆಸರುಗಳನ್ನೇ ಇಡಲು 'ಮರುನಾಮಕರಣ ಆಯೋಗ' ರಚಿಸಬೇಕು' ಎಂದು ಕೋರಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸುಪ್ರೀಂಕೋರ್ಟ್ ವಜಾಮಾಡಿದೆ.
ನ್ಯಾಯಮೂರ್ತಿಗಳಾದ ಕೆ.ಎಂ.ಜೋಸೆಫ್ ಮತ್ತು ಬಿ.ವಿ.ನಾಗರತ್ನ ಅವರಿದ್ದ ಪೀಠವು, ಈ ಬಗ್ಗೆ ಅರ್ಜಿ ಸಲ್ಲಿಸಿದ್ದ ವಕೀಲರಾದ ಅಶ್ವಿನಿ ಉಪಾಧ್ಯಾಯ ಅವರ ಉದ್ದೇಶವನ್ನೇ ಪ್ರಶ್ನಿಸಿತು. 'ಇದು, ದೇಶದಲ್ಲಿ ಉದ್ವಿಗ್ನ ಪರಿಸ್ಥಿತಿ ನೆಲೆಗೊಳ್ಳುವಂತೆ ಹಳೇ ವಿವಾದಗಳಿಗೆ ಮರುಜೀವ ನೀಡಲಿದೆ' ಎಂದು ಪೀಠ ಅಭಿಪ್ರಾಯಪಟ್ಟಿತು.
'ವಿದೇಶಿಯರು ನಮ್ಮ ದೇಶದ ಮೇಲೆ ಆಕ್ರಮಣ ಮಾಡಿದ್ದರು ಮತ್ತು ಆಳ್ವಿಕೆ ನಡೆಸಿದ್ದರು ಎಂಬುದು ವಾಸ್ತವಾಂಶ. ಇತಿಹಾಸದಿಂದ ಆಯ್ದ ಕೆಲ ಭಾಗವನ್ನು ತೆಗೆಯಬೇಕು ಎಂದು ಬಯಸಲಾಗದು. ನಮ್ಮದು ಜಾತ್ಯತೀತ ರಾಷ್ಟ್ರ. ಹಿಂದುತ್ವ ಎಂಬುದು ಒಂದು ಜೀವನಕ್ರಮ. ಇದು ಎಲ್ಲರಿಗೂ ಅನ್ವಯಿಸಲಿದೆ. ಇದರಲ್ಲಿ ಯಾವುದೇ ಧರ್ಮದ ಲೇಪನವಿಲ್ಲ. ದೇಶದ ಇತಿಹಾಸವು ಅದರ ಈಗಿನ ಮತ್ತು ಭವಿಷ್ಯದ ಪೀಳಿಗೆಯನ್ನು ಕಾಡಬಾರದು' ಎಂದು ಪೀಠ ಅಭಿಪ್ರಾಯಪಟ್ಟಿತು.
ಮರು ನಾಮಕರಣ ಆಯೋಗ ರಚಿಸುವಂತೆ ನಿರ್ದೇಶನ ನೀಡಲು ಕೋರಿದ್ದ ಅರ್ಜಿದಾರರು, ಕೇಂದ್ರ ಸರ್ಕಾರ ಇತ್ತೀಚೆಗೆ ಮೊಘಲ್ ಗಾರ್ಡನ್ ಹೆಸರನ್ನು ಅಮೃತ ಉದ್ಯಾನ ಎಂದು ಬದಲಿಸಿದೆ. ಆದರೆ, ಆಕ್ರಮಣಕಾರರ ಹೆಸರು ಹೊಂದಿರುವ ರಸ್ತೆಗಳ ವಿಷಯದಲ್ಲಿ ಯಾವುದೇ ತೀರ್ಮಾನ ಕೈಗೊಂಡಿಲ್ಲ ಎಂದು ವಾದಿಸಿದ್ದರು.
ದೇಶವೀಗ ಸ್ವಾತಂತ್ರ್ಯದ ಅಮೃತ ವರ್ಷದಲ್ಲಿದೆ. ಆದರೆ, ಇನ್ನೂ ಅನೇಕ ಐತಿಹಾಸಿಕ, ಸಾಂಸ್ಕೃತಿಕ, ಧಾರ್ಮಿಕ ಸ್ಥಳಗಳು ವಿದೇಶಿ ಆಕ್ರಮಣಕಾರರು, ಅವರ ಸೇವಕರು ಹಾಗೂ ಕುಟುಂಬ ಸದಸ್ಯರ ಹೆಸರುಗಳನ್ನೇ ಹೊಂದಿವೆ ಎಂದೂ ಅರ್ಜಿದಾರರು ಉಲ್ಲೇಖಿಸಿದ್ದರು.