ಮುಂಬೈ: ತಾಲಿಬಾನ್ ಜೊತೆ ನಂಟು ಹೊಂದಿರುವ ವ್ಯಕ್ತಿಯೊಬ್ಬ ಮುಂಬೈನಲ್ಲಿ ದಾಳಿ ನಡೆಸುವುದಾಗಿ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಗೆ ಇಮೇಲ್ ಕಳುಹಿಸಿದ್ದಾನೆ ಎಂದು ಪೊಲೀಸರು ಶುಕ್ರವಾರ ತಿಳಿಸಿದ್ದಾರೆ.
ತನಿಖಾ ಸಂಸ್ಥೆಯ ಮುಂಬೈ ಕಚೇರಿಗೆ ಗುರುವಾರ ಬೆದರಿಕೆ ಮೇಲ್ ಬಂದಿದೆ.
ನಗರ ಪೊಲೀಸರು ಮತ್ತು ಮಹಾರಾಷ್ಟ್ರ ಭಯೋತ್ಪಾದನಾ ನಿಗ್ರಹ ದಳದವರು (ಎಟಿಎಸ್) ಈ ಬಗ್ಗೆ ಪರಿಶೀಲನೆ ನಡೆಸುತ್ತಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಪೊಲೀಸರ ಪ್ರಕಾರ, ಬೆದರಿಕೆ ಸಂದೇಶ ಕಳುಹಿಸಲು ಬಳಸಲಾದ ಇಮೇಲ್ ವಿಳಾಸ 'ಸಿಐಎ' ಎಂದಿದೆ.
ಇ ಮೇಲ್ ಕಳುಹಿಸಿದ ವ್ಯಕ್ತಿಯ ಐಪಿ (ಇಂಟರ್ನೆಟ್ ಪ್ರೊಟೋಕಾಲ್) ವಿಳಾಸವನ್ನು ಪಾಕಿಸ್ತಾನದಲ್ಲಿ ಪತ್ತೆಹಚ್ಚಲಾಗಿದೆ. ಕಳೆದ ತಿಂಗಳು ತನಿಖಾ ಸಂಸ್ಥೆಗೆ ಇದೇ ರೀತಿಯ ಮೇಲ್ ಕಳುಹಿಸಲಾಗಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.