ನವದೆಹಲಿ: ಜರ್ಮನಿಯ ಚಾನ್ಸಲರ್ ಓಲಾಫ್ ಸ್ಕೋಲ್ಜ್ 2 ದಿನಗಳ ಕಾಲ ಭಾರತಕ್ಕೆ ಭೇಟಿ ನೀಡಲಿದ್ದು. ಶನಿವಾರ (ಫೆ.25) ಬೆಳಿಗ್ಗೆ ಅವರು ದೆಹಲಿಗೆ ಆಗಮಿಸಲಿದ್ದಾರೆ.
ಉಕ್ರೇನ್ ಸಂಘರ್ಷ, ಇಂಡೋ-ಪೆಸಿಫಿಕ್‌ನಲ್ಲಿನ ಪರಿಸ್ಥಿತಿ ಮತ್ತು ಶುದ್ಧ ಇಂಧನ, ವ್ಯಾಪಾರ ಮತ್ತು ಹೊಸ ತಂತ್ರಜ್ಞಾನಗಳ ಕ್ಷೇತ್ರಗಳಲ್ಲಿ ದ್ವಿಪಕ್ಷೀಯ ಸಂಬಂಧಗಳನ್ನು ಹೆಚ್ಚಿಸುವ ಮಾರ್ಗಗಳ ಕುರಿತು ಪ್ರಧಾನಿ ಮೋದಿ ಅವರೊಂದಿಗೆ ಸಮಗ್ರ ಮಾತುಕತೆ ನಡೆಸಲಿದ್ದಾರೆ.
ಚಾನ್ಸಲರ್ ಆಗಿ ಅಧಿಕಾರ ವಹಿಸಿಕೊಂಡ ಬಳಿಕ ಇದೇ ಮೊದಲ ಬಾರಿಗೆ ಅವರು ಭಾರತದ ಪ್ರವಾಸ ಕೈಗೊಂಡಿದ್ದಾರೆ.
ಉಕ್ರೇನ್ ಮೇಲೆ ರಷ್ಯಾ ಆಕ್ರಮಣ ಮಾಡಿ ಒಂದು ವರ್ಷ ತುಂಬಿದ ಒಂದು ದಿನದ ನಂತರ ಅವರು ಭಾರತಕ್ಕೆ ಪ್ರಯಾಣ ಬೆಳೆಸುತ್ತಿದ್ದಾರೆ.
'ಚಾನ್ಸೆಲರ್ ಸ್ಕೋಲ್ಜ್ ಮತ್ತು ಪ್ರಧಾನಿ ಮೋದಿ ನಡುವಿನ ಸಭೆಯಲ್ಲಿ ನಾವು ರಷ್ಯಾ ಮತ್ತು ಉಕ್ರೇನ್ (ಸಂಘರ್ಷ) ಅಜೆಂಡಾದಲ್ಲಿ ಹೆಚ್ಚಿನ ನಿರೀಕ್ಷೆಯನ್ನು ಇರಿಸಿಕೊಂಡಿದ್ದೇವೆ. ಇದು ಕಾರ್ಯಸೂಚಿಯ ಅತ್ಯಂತ ಪ್ರಮುಖ ಭಾಗವಾಗಿದೆ' ಎಂದು ಜರ್ಮನ್ ರಾಯಭಾರಿ ಫಿಲಿಪ್ ಆಕರ್ಮನ್ ಬುಧವಾರ ಹೇಳಿದ್ದಾರೆ.
ಭಾನುವಾರ ಓಲಾಫ್ ಸ್ಕೋಲ್ಜ್ ಅವರು ಬೆಂಗಳೂರಿಗೆ ಭೇಟಿ ನೀಡಿ ನಂತರ ಜರ್ಮನಿಗೆ ವಾಪಸ್ಸಾಗಲಿದ್ದಾರೆ.