ನವದೆಹಲಿ: ಕಳೆದ ಎರಡು ಮೂರು ವಾರಗಳಲ್ಲಿ ಟರ್ಕಿ-ಸಿರಿಯಾದಲ್ಲಿ ಸಂಭವಿಸಿದ ಭೀಕರ ಸರಣಿ ಭೂಕಂಪದಲ್ಲಿ 50 ಸಾವಿರಕ್ಕೂ ಅಧಿಕ ಮಂದಿ ಸಾವಿಗೀಡಾಗಿದ್ದರು. ಅಲ್ಲದೆ ಭಾರಿ ಆಸ್ತಿ-ಪಾಸ್ತಿ ಹಾನಿಗೀಡಾಗಿದ್ದು, ಇನ್ನೂ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ.
ಇದರ ನಡುವೆ ಭಾರತದಲ್ಲೂ ಸದ್ಯದಲ್ಲೇ ಭಾರಿ ಭೂಕಂಪ ಸಂಭವಿಸಬಹುದು ಎಂದು ತಜ್ಞರು ಎಚ್ಚರಿಕೆ ನೀಡಿದ್ದಾರೆ.
ನ್ಯಾಷನಲ್ ಜಿಯೋಫಿಸಿಕಲ್ ರಿಸರ್ಚ್ ಇನ್ಸ್ಟಿಟ್ಯೂಟ್(ಎನ್ಜಿಆರ್ಐ) ತಜ್ಞರು ಈ ಕುರಿತು ಎಚ್ಚರಿಕೆ ನೀಡಿದ್ದಾರೆ. ಹಿಮಾಲಯ ಭಾಗದಲ್ಲಿ ಭೂಕಂಪ ಆಗುವ ಸಾಧ್ಯತೆಗಳಿದ್ದು, ಹಿಮಾಚಲಪ್ರದೇಶ ಮತ್ತು ಉತ್ತರಾಖಂಡದಲ್ಲಿ ಭೂಕಂಪನ ಆಗಬಹುದು ಎಂದು ಎನ್ಜಿಆರ್ಐ ಮುಖ್ಯ ವಿಜ್ಞಾನಿ ಡಾ.ಎನ್. ಪೂರ್ಣಚಂದ್ರ ರಾವ್ ಈ ಮುನ್ನೆಚ್ಚರಿಕೆ ನೀಡಿದ್ದಾರೆ.
ಭೂಮಿ ಮೇಲ್ಮೈ ಹಲವಾರು ಪದರಗಳಿಂದಾಗಿದ್ದು, ಅದು ಚಲನಶೀಲವಾಗಿರುತ್ತದೆ. ಭಾರತದಲ್ಲಿನ ಪದರಗಳು ವರ್ಷಕ್ಕೆ ಐದು ಸೆಂಟಿಮೀಟರ್ನಷ್ಟು ಜರುಗುತ್ತಿರುವ ಪರಿಣಾಮವಾಗಿ ಹಿಮಾಲಯ ಪ್ರದೇಶದಲ್ಲಿ ತೀವ್ರ ಒತ್ತಡ ಸೃಷ್ಟಿಯಾದ್ದರಿಂದ ಭಾರಿ ಭೂಕಂಪ ಉಂಟಾಗುವ ಸಾಧ್ಯತೆ ಇದೆ. ಹಿಮಾಚಲಪ್ರದೇಶ, ಉತ್ತರಾಖಂಡ ಹಾಗೂ ನೇಪಾಳದ ಪಶ್ಚಿಮ ಭಾಗದಲ್ಲಿ ಯಾವುದೇ ಸಂದರ್ಭದಲ್ಲಿ ಭೂಕಂಪ ಸಂಭವಿಸಬಹುದು ಎಂದು ಅವರು ಹೇಳಿದ್ದಾರೆ.