ನವದೆಹಲಿ: ವಿದ್ಯಾರ್ಥಿನಿಯರಿಗೆ ಹಾಗೂ ಮಹಿಳೆಯರಿಗೆ ಋತು ಚಕ್ರದ
ವೇಳೆ ರಜೆ ನೀಡಲು ನಿಯಮಗಳನ್ನು ರೂಪಿಸಲು ರಾಜ್ಯಗಳಿಗೆ ನಿರ್ದೇಶನ ನೀಡಬೇಕೆಂದು ಕೋರಿ
ಸಲ್ಲಿಸಿದ್ದ ಅರ್ಜಿಯ ವಿಚಾರಣೆಗೆ ಸುಪ್ರೀಂ ಕೋರ್ಟ್ ನಿರಾಕರಿಸಿದೆ.
ಈ ವಿಷಯ ಸರ್ಕಾರದ ನೀತಿಗೆ ಸಂಬಂಧಿಸಿದ್ದಾಗಿದೆ ಎಂದು ನ್ಯಾ.ಡಿ.ವೈ ಚಂದ್ರಚೂಡ್ ಅವರಿದ್ದ
ಪೀಠ ಹೇಳಿದ್ದು, ಈ ಸಂಬಂಧ ಕೇಂದ್ರ ಮಹಿಳಾ ಹಾಗೂ ಮಕ್ಕಳ ಅಭಿವೃದ್ಧಿ ಸಚಿವಾಲಯಕ್ಕೆ
ಮನವಿ ಸಲ್ಲಿಸಬಹುದಾಗಿದೆ ಎಂದು ಸಲಹೆ ನೀಡಿದೆ.
ದೆಹಲಿ ನಿವಾಸಿ ಶೈಲೇಂದ್ರ ಮಣಿ ತ್ರಿಪಾಠಿ ಎಂಬುವವರು ಅರ್ಜಿ ಸಲ್ಲಿಸಿ, ಕೇಂದ್ರ ಹಾಗೂ ಎಲ್ಲಾ ರಾಜ್ಯಸರ್ಕಾರಗಳಿಗೂ ಮಾತೃತ್ವ ಪ್ರಯೋಜನ ಕಾಯಿದೆ, 1961 ರ ಸೆಕ್ಷನ್ 14 ರ ಅನುಸರಣೆಯಲ್ಲಿ ನಿರ್ದೇಶನ ನೀಡಬೇಕೆಂದು ಮನವಿ ಸಲ್ಲಿಸಿದ್ದರು.
'ಋತು ಚಕ್ರದ ಅವಧಿಯನ್ನು ಸಮಾಜ, ಸರ್ಕಾರ ಮತ್ತು ಇತರರಿಂದ ಹೆಚ್ಚಾಗಿ ಕಡೆಗಣಿಸಲಾಗಿದೆ. ಆದರೆ, ಕೆಲವು ಸಂಸ್ಥೆಗಳು ಮತ್ತು ರಾಜ್ಯ ಸರ್ಕಾರಗಳು ಇದಕ್ಕೆ ಮಾನ್ಯತೆ ನೀಡಿವೆ. ಉಳಿದ ರಾಜ್ಯಗಳಲ್ಲಿ ಮಹಿಳೆಯರಿಗೆ ಋತುಚಕ್ರದ ನೋವಿನ ರಜೆ ಅಥವಾ ಮುಟ್ಟಿನ ರಜೆಯನ್ನು ನಿರಾಕರಿಸುವುದು ಸಂವಿಧಾನದ 14ನೇ ಪರಿಚ್ಛೇದದ ಅಡಿಯಲ್ಲಿ ಅವರ ಸಮಾನತೆಯ ಹಕ್ಕಿನ ಉಲ್ಲಂಘನೆಯಾಗಿದೆ' ಎಂದು ತ್ರಿಪಾಠಿ ಹೇಳಿದ್ದರು.