ಮಟ್ಟನ್ : ಮಹಾಶಿವರಾತ್ರಿ ಆಚರಣೆ ವೇಳೆ ಜಮ್ಮು ಮತ್ತು ಕಾಶ್ಮೀರದ ಅನಂತನಾಗ್ ಜಿಲ್ಲೆಯ ಮಾರ್ತಾಂಡ್ ಸೂರ್ಯ ದೇವಾಲಯದಲ್ಲಿ ಹಿಂದೂ ದೇವರು ಶಿವನಿಗೆ ನೀರು ಅರ್ಪಿಸಿದ ಭಕ್ತರಲ್ಲಿ ರಾಜಸ್ಥಾನದ ಮುಸ್ಲಿಂ ದಂಪತಿ ಸಹ ಸೇರಿದ್ದರು.
'ಇದು ಹಿಂದೂಗಳಿಗೆ (ಮಹಾಶಿವರಾತ್ರಿ) ಮತ್ತು ಮುಸ್ಲಿಮರಿಗೆ (ಶಬ್-ಎ-ಮೆ ರಾಜ್) ಶುಭ ಸಂದರ್ಭವಾಗಿದೆ. ನಾವು ಮಹಮ್ಮದೀಯರು (ಮುಸ್ಲಿಮರು) ದೇವಾಲಯಕ್ಕೆ ಭೇಟಿ ನೀಡಲು ಸಾಧ್ಯವಿಲ್ಲವೆಂದಲ್ಲ' ಎಂದು ಹರಿಯಾಣದ ಕುರುಕ್ಷೇತ್ರ ಮೂಲದ ಜೋಯಾ ಖಾನ್ ತಿಳಿಸಿದರು.
'ಶಿವರಾತ್ರಿ ನಮಗೆ ಪ್ರಾರ್ಥನೆಯ ದಿನ. ಭಕ್ತರು ಅದನ್ನು ಇಲ್ಲಿ ಹೇಗೆ ಆಚರಿಸುತ್ತಾರೆ ಎಂಬುದನ್ನು ನಾವು ನೋಡುತ್ತೇವೆ' ಎಂದು ರಾಜಸ್ಥಾನದ ಫೈಜಾನ್ ಖಾನ್ ಅವರನ್ನು ಮದುವೆಯಾಗಿರುವ ಜೋಯಾ ಹೇಳಿದರು.
'ನಾನು ಶಿವನಿಗೆ ಜಲಾಭಿಷೇಕ ಮಾಡಿದ್ದೇನೆ. ಇದು ದಂಪತಿಗೆ ಒಳ್ಳೆಯದು ಎಂದು ಪರಿಗಣಿಸಲಾಗಿದೆ. ನನ್ನ ತಾಯಿ ಕೂಡ ಈ ಬಗ್ಗೆ ಹೇಳಿದ್ದಾರೆ. ನಾವು ಮುಸ್ಲಿಮರು. ಆದರೆ ಈ ಸಂಪ್ರದಾಯ ಇಷ್ಟಪಡುತ್ತೇವೆ. ಕಾಶ್ಮೀರಕ್ಕೆ ಬರುವ ಮೊದಲು ಕಣಿವೆಯಲ್ಲಿ ಹಿಂದೂಗಳು ಮತ್ತು ಮುಸ್ಲಿಮರ ನಡುವೆ ಕೋಮು ಉದ್ವಿಗ್ನತೆ ಇದೆ ಎಂಬ ಭಾವನೆ ಇತ್ತು. ಆದರೆ ಅಂತಹದ್ದೇನೂ ಇಲ್ಲ. ಧರ್ಮದ ಆಧಾರದ ಮೇಲೆ ಯಾವುದೇ ತಾರತಮ್ಯವಿಲ್ಲ' ಎಂದು ಜೋಯಾ ಹೇಳಿದರು.
ಶ್ರೀನಗರದ ದಾಲ್ಗೇಟ್‌ನಲ್ಲಿರುವ ಶಂಕರಾಚಾರ್ಯ ದೇವಸ್ಥಾನ ಸಹಿತ ರಾಜ್ಯದ ಹಲವೆಡೆ ಶಿವರಾತ್ರಿ ಆಚರಿಸಲಾಯಿತು.