ನವದೆಹಲಿ:ಖ್ಯಾತ ನ್ಯಾಯವಾದಿ, ಕೇಂದ್ರದ ಮಾಜಿ ಕಾನೂನು ಸಚಿವ ಹಾಗೂ ಪ್ರಶಾಂತ್ ಭೂಷಣ್ ಅವರ ತಂದೆ ಶಾಂತಿ ಭೂಷಣ್ (97) ಅವರು ಹೊಸದಿಲ್ಲಿಯಲ್ಲಿರುವ ತಮ್ಮ ನಿವಾಸದಲ್ಲಿ ಮಂಗಳವಾರ ನಿಧನರಾಗಿದ್ದಾರೆ.
ಭೂಷಣ್ ಅವರು ಹಲವು ಪ್ರಸಿದ್ಧ ಹಾಗೂ ವಿವಾದಾತ್ಮಕ ಪ್ರಕರಣಗಳಲ್ಲಿ ವಾದ ಮಂಡಿಸಿ ಪ್ರಸಿದ್ಧರಾಗಿದ್ದರು.
ಅಲಹಾಬಾದ್ ಹೈಕೋರ್ಟ್ನಲ್ಲಿನ ಪ್ರಕರಣದಲ್ಲಿ ಅವರು ರಾಜ್ ನರೈನ್ ಅವರನ್ನು ಪ್ರತಿನಿಧಿಸಿದ್ದರು. ಇದರ ಪರಿಣಾಮವಾಗಿ ಆಗಿನ ಪ್ರಧಾನಿ ಇಂದಿರಾ ಗಾಂಧಿ ಅವರು 1974ರಲ್ಲಿ ಪದಚ್ಯುತಗೊಳ್ಳಬೇಕಾಯಿತು. ಅವರು ಹಲವು ಸಾರ್ವಜನಿಕ ಹಿತಾಸಕ್ತಿ ದಾವೆಗಳಲ್ಲಿ ಹೋರಾಡಿದ್ದರು. ಹಾಗೂ ನಾಗರಿಕ ಹಕ್ಕು ಹೋರಾಟಗಾರರಾಗಿದ್ದರು. ಆರಂಭದಲ್ಲಿ ಕಾಂಗ್ರೆಸ್ನ ಹಾಗೂ ತರುವಾಯ ಜನತಾ ಪಕ್ಷದ ಸದಸ್ಯರಾಗಿದ್ದ ಭೂಷಣ್ ಅವರು ರಾಜ್ಯ ಸಭೆಯ ಸಂಸದರಾಗಿ ಒಂದು ಅವಧಿ ಸೇವೆ ಸಲ್ಲಿಸಿದ್ದರು. ಅವರು ಸುಮಾರು 6 ವರ್ಷಗಳ ಕಾಲ ಬಿಜೆಪಿಯಲ್ಲಿ ಕೂಡ ಇದ್ದರು.
2012ರಲ್ಲಿ ಆಮ್ ಆದ್ಮಿ ಪಕ್ಷವನ್ನು ಸ್ಥಾಪಿಸಿದವರಲ್ಲಿ ಪುತ್ರ ಪ್ರಶಾಂತ್ ಭೂಷಣ್ ಅವರೊಂದಿಗೆ ಅವರು ಕೂಡ ಇದ್ದರು. ಅನಂತರ ತಂದೆ ಮತ್ತು ಪುತ್ರ ಆಪ್ಗೆ ರಾಜೀನಾಮೆ ನೀಡಿದ್ದರು.