ನವದೆಹಲಿ: 'ವರ್ಚುವಲ್ ಕೋರ್ಟ್ ವಿಚಾರಣೆಯಿಂದ ದಕ್ಷತೆಯು ಹೆಚ್ಚಿದ್ದು, ಈ ವ್ಯವಸ್ಥೆಗಾಗಿ ಸರ್ಕಾರವು ದೊಡ್ಡಮೊತ್ತದ ಹಣ ಮಂಜೂರು ಮಾಡಿದ್ದು, ಮೂಲಸೌಕರ್ಯವನ್ನು ಒದಗಿಸಿದೆ. ಈ ವ್ಯವಸ್ಥೆಯನ್ನು ಬಳಸಿಕೊಳ್ಳುವ ಅಗತ್ಯವಿದೆ' ಎಂದು ಸುಪ್ರೀಂ ಕೋರ್ಟ್‌ನ ನ್ಯಾಯಮೂರ್ತಿ ಸಂಜಯ್ ಕಿಶನ್ ಕೌಲ್ ಭಾನುವಾರ ಹೇಳಿದ್ದಾರೆ.
'ದೆಹಲಿ ಮಧ್ಯಸ್ಥಿಕೆ ವಾರಾಂತ್ಯ' ಕುರಿತ ನಾಲ್ಕು ದಿನಗಳ ವಿಚಾರಸಂಕಿರಣದ ಸಮಾರೋಪದಲ್ಲಿ 'ಮಧ್ಯಸ್ಥಿಕೆ ಮುನ್ನೋಟ-2030: ಭವಿಷ್ಯ ಏನು ಬಯಸುತ್ತದೆ' ವಿಷಯ ಕುರಿತು ಮಾತನಾಡಿದ ಅವರು, 'ಇಡೀ ಜಗತ್ತು ಕೋವಿಡ್-19 ಸಾಂಕ್ರಾಮಿಕದ ಸಂದರ್ಭದಲ್ಲಿದ್ದಾಗ ಅಂತರರಾಷ್ಟ್ರೀಯ ಮಧ್ಯಸ್ಥಿಕೆ ಸಮುದಾಯವು ವರ್ಚುವಲ್ ವ್ಯವಸ್ಥೆಯನ್ನು ಅಳವಡಿಸಿಕೊಂಡಿತು. ಕ್ರಮೇಣ ವರ್ಚುವಲ್ ಅಥವಾ ಹೈಬ್ರಿಡ್ ವಿಚಾರಣೆಯು ಅಭ್ಯಾಸವಾಯಿತು. ಇದರಿಂದ ಭೌತಿಕವಾಗಿ ಹಾಜರಾಗುವ ವ್ಯವಸ್ಥೆಗೆ ವಿನಾಯಿತಿ ದೊರೆಯಿತು' ಎಂದು ಅಭಿಪ್ರಾಯಪಟ್ಟರು.
'ವರ್ಚುವಲ್ ಕೋರ್ಟ್ ವಿಚಾರಣೆಯಿಂದಾಗಿ ದಕ್ಷತೆಯ ಮಟ್ಟವು ಹೆಚ್ಚಾಗಿದೆ ಎಂಬುದನ್ನು ಹೇಳಬಯಸುತ್ತೇನೆ. ಹಾಗಾಗಿ, ಇಂದಿಗೂ ನಾನು ಹೈಬ್ರಿಡ್ ವ್ಯವಸ್ಥೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ. ಅಂತೆಯೇ ವಕೀಲರು ವಿಡಿಯೊ ಕಾನ್ಫರೆನ್ಸ್ ಮೂಲಕ ಪಾಲ್ಗೊಳ್ಳಲು ಅನುಮತಿ ನೀಡುತ್ತೇನೆ. ವರ್ಚುವಲ್ ವ್ಯವಸ್ಥೆಯಿಂದಾಗಿ ಪ್ರಯಾಣದ ವೆಚ್ಚವನ್ನು ಉಳಿಸಬಹುದು. ಅಲ್ಲದೇ ಕಡಿಮೆ ಸಮಯದಲ್ಲಿ ವಕೀಲರು ತಮ್ಮ ವಿಷಯದ ಕುರಿತಾಗಿ ಸಿದ್ಧತೆ ಮಾಡಿಕೊಳ್ಳಬಹುದು. ಇದರ ಜತೆಗೇ ತಂತ್ರಜ್ಞಾನದ ಮೂಲ ಜ್ಞಾನ, ಸೈಬರ್ ಭದ್ರತೆ ಮತ್ತಿತರರ ವಿಷಯಗಳ ಬಗ್ಗೆಯೂ ಅರಿವು ಇರುವುದು ಅಗತ್ಯ' ಎಂದೂ ಕೌಲ್ ಹೇಳಿದರು.
'ಚಾಟ್‌ಜಿಪಿಟಿಯಂತಹ ಕೃತಕ ಬುದ್ಧಿಮತ್ತೆಗೆ (ಆರ್ಟಿಫಿಶಿಯಲ್ ಇಂಟೆಲಿಜೆನ್ಸ್) ಸಂಬಂಧಿಸಿದಂತೆ, ಜನರು ಯಾವುದೇ ಪ್ರಶ್ನೆಗೆ ಉತ್ತರಗಳನ್ನು ಪಡೆಯಬಹುದು. ಕೃತಕ ಬುದ್ಧಿಮತ್ತೆಯ ಬಳಕೆಯನ್ನು ಅನ್ವೇಷಿಸಲು, ಸುಪ್ರೀಂ ಕೋರ್ಟ್ ಎಐ ಸಮಿತಿಯನ್ನು ರಚಿಸಿದ್ದು, ವಿವಿಧ ಅಂಶಗಳನ್ನು ಪರಿಶೀಲಿಸುತ್ತಿದೆ. ಆದಾಗ್ಯೂ, ಕೃತಕ ಬುದ್ಧಿಮತ್ತೆ ವ್ಯವಸ್ಥೆಯನ್ನು ಬಹಳ ಎಚ್ಚರಿಕೆಯಿಂದ ಬಳಸಬೇಕು' ಎಂದು ಅವರು ಹೇಳಿದರು.