ನವದೆಹಲಿ : ಪಕ್ಷದ
ರಾಜ್ಯ ಘಟಕದಲ್ಲಿನ ಬಣಗಳ ನಡುವಿನ ಕಿತ್ತಾಟ ಹಾಗೂ ರಾಜಕೀಯ ಪರಿಸ್ಥಿತಿ ಕುರಿತು
ಪರಿಶೀಲನೆ ನಡೆಸಿ, ವರದಿ ಸಲ್ಲಿಸುವ ಸಲುವಾಗಿ ಕಾಂಗ್ರೆಸ್ ಪಕ್ಷವು ಕೇರಳದ ಹಿರಿಯ
ಮುಖಂಡ ರಮೇಶ್ ಚೆನ್ನಿತ್ತಲ ಅವರನ್ನು ಗುರುವಾರ
ಮಹಾರಾಷ್ಟ್ರಕ್ಕೆ ಕಳುಹಿಸಿದೆ.
ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ನಾನಾಪಟೋಲೆ ಹಾಗೂ ವಿಧಾನಸಭೆಯಲ್ಲಿ ಶಾಸಕಾಂಗ ಪಕ್ಷದ ನಾಯಕ ಬಾಳಾ ಸಾಹೇಬ್ ಥೋರಟ್ ನಡುವಿನ ಭಿನ್ನಾಭಿಪ್ರಾಯ- ಸಂಘರ್ಷ ತೀವ್ರಗೊಂಡ ಹಿನ್ನೆಲೆಯಲ್ಲಿ ಪಕ್ಷವು ಈ ಕ್ರಮ ಕೈಗೊಂಡಿದೆ. ವಿಧಾನಸಭೆಯಲ್ಲಿ ಪಕ್ಷದ ನಾಯಕನ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾಗಿ ಇತ್ತೀಚೆಗೆ ಥೋರಟ್ ಘೋಷಿಸಿದ್ದರು. ಅದರ ಬೆನ್ನಲ್ಲೇ, ಪಕ್ಷದ ಮಹಾರಾಷ್ಟ್ರ ಉಸ್ತುವಾರಿ ಎಚ್.ಕೆ.ಪಾಟೀಲ ಅವರು ಥೋರಟ್ ಅವರೊಂದಿಗೆ ಸಭೆ ನಡೆಸಿ, ಅವರ ಮನವೊಲಿಸುವ ಪ್ರಯತ್ನ ಮಾಡಿದ್ದರು.
'ರಾಜ್ಯದಲ್ಲಿರುವ ರಾಜಕೀಯ ಪರಿಸ್ಥಿತಿಯನ್ನು ಪರಿಶೀಲಿಸುವ ಸಲುವಾಗಿ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ರಮೇಶ್ ಚೆನ್ನಿತ್ತಲ ಅವರನ್ನು ಮಹಾರಾಷ್ಟ್ರಕ್ಕೆ ಕಳುಹಿಸಿದ್ದಾರೆ. ಅಲ್ಲಿನ ಪರಿಸ್ಥಿತಿ ಕುರಿತು ಚೆನ್ನಿತಲ ಅವರು ಖರ್ಗೆ ಅವರಿಗೆ ವರದಿ ಸಲ್ಲಿಸುವರು' ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.