ರಾಯ್‌ಪುರ: ಸಮಾನ ಮನಸ್ಕ ಜಾತ್ಯತೀತ ಶಕ್ತಿಗಳನ್ನು ಗುರುತಿಸಲು, ಸಜ್ಜುಗೊಳಿಸಲು ಮತ್ತು ಒಗ್ಗೂಡಿಸಲು ಹಾಗೂ ತನ್ನ ಸಿದ್ಧಾಂತವನ್ನು ಒಪ್ಪುವ ಜಾತ್ಯತೀತ ಪ್ರಾದೇಶಿಕ ಪಕ್ಷಗಳೊಂದಿಗೆ ಮೈತ್ರಿ ಮಾಡಿಕೊಳ್ಳಲು ಎಲ್ಲ ಪ್ರಯತ್ನಗಳನ್ನು ಮಾಡಬೇಕು ಎಂದು ಕಾಂಗ್ರೆಸ್ ಶನಿವಾರ ತನ್ನ ಕರಡು ರಾಜಕೀಯ ನಿರ್ಣಯದಲ್ಲಿ ಹೇಳಿದೆ. ಅಲ್ಲದೆ ಯಾವುದೇ ತೃತೀಯ ರಂಗ ರಚನೆಯಿಂದ ಎನ್‌ಡಿಎಗೆ ಲಾಭವಾಗಲಿದೆ ಎಂದು ಪ್ರತಿಪಾದಿಸಿದೆ.
ರಾಯ್‌ಪುರದಲ್ಲಿ ನಡೆಯುತ್ತಿರುವ ಪಕ್ಷದ ಮೂರು ದಿನಗಳ 85ನೇ ಸರ್ವಸದಸ್ಯರ ಅಧಿವೇಶನದ ಎರಡನೇ ದಿನದಂದು ಈ ನಿರ್ಣಯದ ಕುರಿತು ಚರ್ಚಿಸಲಾಗುತ್ತಿದ್ದು, ಸಂಜೆ ವೇಳೆಗೆ ಅಂಗೀಕಾರವಾಗುವ ನಿರೀಕ್ಷೆ ಇದೆ.
ರಾಜಕೀಯ ವ್ಯವಹಾರಗಳ ಉಪ-ಗುಂಪು ಈ ಕರಡನ್ನು ಸಿದ್ಧಪಡಿಸಿದೆ ಮತ್ತು ಮಾಜಿ ಕೇಂದ್ರ ಸಚಿವ ಎಂ ವೀರಪ್ಪ ಮೊಯ್ಲಿ ಮತ್ತು ಮಹಾರಾಷ್ಟ್ರ ಮಾಜಿ ಮುಖ್ಯಮಂತ್ರಿ ಅಶೋಕ್ ಚವಾಣ್ ಇದರ ನೇತೃತ್ವ ವಹಿಸಿದ್ದಾರೆ.
"ಜಾತ್ಯತೀತ ಮತ್ತು ಸಮಾಜವಾದಿ ಶಕ್ತಿಗಳ ಏಕತೆಯು ಕಾಂಗ್ರೆಸ್ ಪಕ್ಷದ ಭವಿಷ್ಯದ ವಿಶಿಷ್ಟ ಲಕ್ಷಣವಾಗಿದೆ. ಸಮಾನ ಮನಸ್ಕ ಜಾತ್ಯತೀತ ಶಕ್ತಿಗಳನ್ನು ಗುರುತಿಸಲು, ಸಜ್ಜುಗೊಳಿಸಲು ಮತ್ತು ಒಗ್ಗೂಡಿಸಲು ಕಾಂಗ್ರೆಸ್ ಎಲ್ಲಾ ಪ್ರಯತ್ನಗಳನ್ನು ಮಾಡಬೇಕು" ಎಂದು ಕರಡು ನಿರ್ಣಯ ಹೇಳಿದೆ.
"ನಮ್ಮ ಸಿದ್ಧಾಂತವನ್ನು ಒಪ್ಪುವ ಜಾತ್ಯತೀತ ಪ್ರಾದೇಶಿಕ ಪಕ್ಷಗಳೊಂದಿಗೆ ನಾವು ಮೈತ್ರಿ ಮಾಡಿಕೊಳ್ಳಬೇಕು. ಸಾಮಾನ್ಯ ಸೈದ್ಧಾಂತಿಕ ಆಧಾರದ ಮೇಲೆ ಎನ್‌ಡಿಎ(ನ್ಯಾಷನಲ್ ಡೆಮಾಕ್ರಟಿಕ್ ಅಲಯನ್ಸ್) ಅನ್ನು ಎದುರಿಸಲು ಏಕೀಕೃತ ಪ್ರತಿಪಕ್ಷದ ತುರ್ತು ಅಗತ್ಯವಿದೆ. ಯಾವುದೇ ಮೂರನೇ ಶಕ್ತಿಯ ಹೊರಹೊಮ್ಮುವಿಕೆಯಿಂದ ಬಿಜೆಪಿ/ಎನ್‌ಡಿಎಗೆ ಲಾಭವಾಗಲಿದೆ" ಎಂದು ನಿರ್ಣಯದಲ್ಲಿ ತಿಳಿಸಲಾಗಿದೆ.