ನವದೆಹಲಿ: ಸಚಿವ ಸ್ಥಾನಕ್ಕೆ ಮನೀಶ್ ಸಿಸೋಡಿಯಾ ಮತ್ತು ಸತ್ಯೇಂದ್ರ ಜೈನ್ ರಾಜೀನಾಮೆ ನೀಡಿದ್ದು, ಅವರ ರಾಜೀನಾಮೆಗಳನ್ನು ಸಿಎಂ ಅರವಿಂದ್ ಕೇಜ್ರಿವಾಲ್ ಅಂಗೀಕರಿಸಿದ್ದಾರೆ ಎಂದು ತಿಳಿದುಬಂದಿದೆ.
ಅಬಕಾರಿ ಹಗರಣದಲ್ಲಿ ಬಂಧನಕ್ಕೀಡಾಗಿರುವ ಮನೀಶ್ ಸಿಸೋಡಿಯಾ ಮತ್ತು ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯದಿಂದ (ಇ.ಡಿ) ಬಂಧನಕ್ಕೊಳಗಾಗಿರುವ ಎಎಪಿ ಸರ್ಕಾರದ ಆರೋಗ್ಯ ಸಚಿವ ಸತ್ಯೇಂದ್ರ ಜೈನ್ ತಿಹಾರ್ ಜೈಲಿನಲ್ಲಿದ್ದಾರೆ. ಇದೀಗ ಇಬ್ಬರೂ ಸಚಿವರು ತನ್ನ ಸಚಿವ ಸ್ಥಾನಕ್ಕೆ ರಾಜಿನಾಮೆ ನೀಡಿದ್ದು, ಇಬ್ಬರ ರಾಜಿನಾಮೆಯನ್ನು ಸಿಎಂ ಅರವಿಂದ್ ಕೇಜ್ರಿವಾಲ್ ಅಂಗೀಕರಿಸಿದ್ದಾರೆ ಎಂದು ತಿಳಿದುಬಂದಿದೆ.
ಭ್ರಷ್ಟಾಚಾರ ಆರೋಪ ಎದುರಿಸುತ್ತಿದ್ದ ಈ ಇಬ್ಬರು ಸಚಿವರ ರಾಜೀನಾಮೆಗೆ ಬಿಜೆಪಿಯಿಂದ ನಿರಂತರ ಬೇಡಿಕೆ ಇತ್ತು. ಏತನ್ಮಧ್ಯೆ, ದೆಹಲಿ ಸರ್ಕಾರದಲ್ಲಿ ಈ ದೊಡ್ಡ ಪುನಾರಚನೆ ನಡೆದಿದ್ದು, ಮಾಹಿತಿ ಪ್ರಕಾರ ಮನೀಶ್ ಸಿಸೋಡಿಯಾ ಅವರ ಇಲಾಖೆಗಳನ್ನು ಕೈಲಾಶ್ ಗೆಹ್ಲೋಟ್ ಮತ್ತು ರಾಜ್ ಕುಮಾರ್ ಆನಂದ್ ಅವರಿಗೆ ನೀಡುವ ಸಾಧ್ಯತೆ ಇದೆ.
ಸಿಸೋಡಿಯಾ ಅವರು 18 ಸಚಿವಾಲಯಗಳ ಉಸ್ತುವಾರಿಯನ್ನು ನಿರ್ವಹಿಸುತ್ತಿದ್ದರು. ಗಮನಾರ್ಹವಾಗಿ, ಮನೀಶ್ ಸಿಸೋಡಿಯಾ ಅವರು ಶಿಕ್ಷಣ, ಹಣಕಾಸು, ಯೋಜನೆ, ಭೂಮಿ ಮತ್ತು ಕಟ್ಟಡ, ಸೇವೆಗಳು, ಪ್ರವಾಸೋದ್ಯಮ, ಕಲೆ-ಸಂಸ್ಕೃತಿ ಮತ್ತು ಭಾಷೆ, ಜಾಗೃತಿ, ಕಾರ್ಮಿಕ ಮತ್ತು ಉದ್ಯೋಗ, ಆರೋಗ್ಯ, ಕೈಗಾರಿಕೆ, ವಿದ್ಯುತ್, ಗೃಹ, ನಗರಾಭಿವೃದ್ಧಿ, ನೀರಾವರಿ ಜೊತೆಗೆ ಲೋಕೋಪಯೋಗಿ ಇಲಾಖೆಯನ್ನು ಹೊಂದಿದ್ದಾರೆ. ಪ್ರವಾಹ ನಿಯಂತ್ರಣ ಮತ್ತು ಜಲ ಇಲಾಖೆ ಸೇರಿದಂತೆ ಒಟ್ಟು 18 ಸಚಿವಾಲಯಗಳನ್ನು ಅವರು ನಿರ್ವಹಿಸುತ್ತಿದ್ದರು.
ಅಂತೆಯೇ ಎಎಪಿ ಪಕ್ಷದಲ್ಲಿ ಸಿಸೋಡಿಯಾ ಕೇಜ್ರಿವಾಲ್ ಬಳಿಕ ಎರಡನೇ ಹಂತದ ಪ್ರಮುಖ ನಾಯಕರಾಗಿದ್ದು, ಸಚಿವ ಸತ್ಯೇಂದ್ರ ಜೈನ್ ಈಗಾಗಲೇ ಜೈಲಿನಲ್ಲಿದ್ದು, ಅಂದಿನಿಂದ ಸತ್ಯೇಂದ್ರ ಜೈನ್ ಅವರ ಇಲಾಖೆಗಳ ಕೆಲಸವನ್ನೂ ಸಿಸೋಡಿಯಾ ನಿರ್ವಹಿಸುತ್ತಿದ್ದರು. ಇದೀಗ ಅವರ ಬಂಧನದ ಹಿನ್ನಲೆಯಲ್ಲಿ ಮತ್ತು ಹಾಲಿ ಬೆಳವಣಿಗೆಗಳು ರಾಜ್ಯದಲ್ಲಿ ಆಡಳಿತಾರೂಢ ಪಕ್ಷಕ್ಕೆ ತೀವ್ರ ಮುಜುಗರಕ್ಕೀಡಾಗಿದೆ.