ಕೊಚ್ಚಿ: ಮದುವೆ ದಿನವೇ ವಿವಾಹದ ದಿರಿಸಿನಲ್ಲೇ ವಧು-ವರ ಮತ ಚಲಾಯಿಸಲು ಅಥವಾ ಪರೀಕ್ಷೆಗೆ ಹಾಜರಾಗಲು ಬರುವ ಸಂಗತಿ ಅತ್ಯಪರೂಪಕ್ಕೊಮ್ಮೆ ಸಂಭವಿಸಿರುತ್ತದೆ. ಅಂಥದ್ದೇ ಒಂದು ಅಪರೂಪದ ಸಂಗತಿಗೆ ವಧುವೊಬ್ಬಳು ಸಾಕ್ಷಿಯಾಗಿದ್ದಾಳೆ.
ಇಲ್ಲೊಬ್ಬಳು ವಧು ಮದುವೆ ದಿನವೇ ಅದೇ ಉಡುಪಿನಲ್ಲಿ ಪರೀಕ್ಷೆಗೆ ಹಾಜರಾಗಿದ್ದು, ಆ ಕುರಿತ ವಿಡಿಯೋವೊಂದು ವೈರಲ್ ಆಗಿದೆ.ಅಂದಹಾಗೆ ಈ ಪ್ರಕರಣ ಕೇರಳದಲ್ಲಿ ನಡೆದಿದೆ. ಇಲ್ಲಿನ ಬೆಥನಿಯ ನವಜೀವನ್ ಕಾಲೇಜ್ ಆಫ್ ಫಿಸಿಯೋಥೆರಪಿಯ ಶ್ರೀಲಕ್ಷ್ಮೀ ಅನಿಲ್ ಗಮನ ಸೆಳೆದಿರುವ ವಧು.
ವೈದ್ಯಕೀಯ ವಿದ್ಯಾರ್ಥಿನಿ ಆಗಿರುವ ಈಕೆಯ ಮದುವೆಯ ದಿನದಂದೇ ಫಿಸಿಯೋಥೆರಪಿ ಎಕ್ಸಾಂ ಇದ್ದ ಕಾರಣ ಇವಳು ಮದುವೆಗೆ ಧರಿಸಿದ್ದ ದಿರಿಸಿನ ಮೇಲೆ ವೈಟ್ ಕೋಟ್ ತೊಟ್ಟು, ಸ್ಟೆತೋಸ್ಕೋಪ್ ಹಾಕಿಕೊಂಡು ಹಾಜರಾಗಿದ್ದಾಳೆ. ಈ ಅಪರೂಪದ ಸನ್ನಿವೇಶದ ವಿಡಿಯೋವನ್ನು 'ಫಿಸಿಯೋಥೆರಪಿ ಎಕ್ಸಾಂ ಮತ್ತು ಮದುವೆ ಒಂದೇ ದಿನ' ಎಂಬ ಕ್ಯಾಪ್ಷನ್ ಜತೆ ಈಕೆ ತನ್ನ ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡಿದ್ದು, ಭರ್ಜರಿ ಪ್ರತಿಕ್ರಿಯೆಯನ್ನು ಪಡೆದಿದೆ.